

ಬೆಂಗಳೂರು: ರಾಜ್ಯ ಸಚಿವ ಪುನಾರಚನೆ ಹಾಗೂ ನವೆಂಬರ್ ಕ್ರಾಂತಿ ವದಂತಿ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.15ರಂದು ದೆಹಲಿಗೆ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ. ಭೇಟಿ ಕುರಿತು ಊಹಾಪೋಹಗಳು ಹೆಚ್ಚಾಗಿವೆ.
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನ.14ರಂದು ಪ್ರಕಟವಾಗಲಿದ್ದು, ಅದಾದ ಮರುದಿನವೇ ಅಂದರೆ ನ.15ರಂದು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ 2-3 ದಿನಗಳ ಕಾಲ ಅಲ್ಲೇ ಉಳಿಯಲಿದ್ದಾರೆಂದು ಹೇಳಲಾಗುತ್ತಿದೆ.
ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ. ಆದರೆ, ಪುಸ್ತಕ ಬಿಡುಗಡೆಗೆ ತೆರಳಲಿರುವವರು ಮೂರು ದಿನ ಅಲ್ಲೇ ಉಳಿದುಕೊಳ್ಳುವ ಚಿಂತನೆಯನ್ನೂ ಹೊಂದಿರುವುದರಿಂದ ಕುತೂಹಲಗಳು ಹೆಚ್ಚಾಗಿವೆ.
ಈ ಮೂರು ದಿನಗಳ ಭೇಟಿ ವೇಳೆ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ಈ ವೇಳೆ ಸಂಪುಟ ವಿಸ್ತರಣೆ/ಪುನರ್ ರಚನೆ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಚನ್ನಮ್ಮನ ಕಿತ್ತೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸಂಪುಟ ಪುನಾರಚನೆ/ವಿಸ್ತರಣೆ ಕುರಿತ ವದಂತಿಯನ್ನು ಖಚಿತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿಗೆ ಹೋದಾಗಲೆಲ್ಲ ನಾಯಕರನ್ನು ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತೇನೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಆಡಳಿತದ ಬಗ್ಗೆ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲ ಅಧಿವೇಶನ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸುತ್ತೇವೆ. ಅದೇ ರೀತಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿರುವಂತೆ ಕಿತ್ತೂರು ಕರ್ನಾಟಕಕ್ಕೂ ಸ್ಥಾಪಿಸಲು ಪರಿಶೀಲಿಸಲಾಗುವುದು ಎಂದರು.
Advertisement