

ಬೆಂಗಳೂರು: 1.12 ಕೋಟಿ ರೂ. ಮೌಲ್ಯದ ಶ್ರೀಗಂಧದ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಅಂತರರಾಜ್ಯ ಗ್ಯಾಂಗ್‌ನ ನಾಲ್ವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 750 ಕೆಜಿ ಶ್ರೀಗಂಧದ ಮರವನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳನ್ನು ಆಂಧ್ರಪ್ರದೇಶದ ಕರ್ನೂಲ್ ನಿವಾಸಿಗಳಾದ ಅಬ್ದುಲ್ ಕಲಾಂ(47), ರಾಮ ಭೋಪಾಲ್(40), ಶೇಖ್ ಶಾರುಖ್(31) ಮತ್ತು ಪರಮೇಶ್(30) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅಕ್ಟೋಬರ್ 16 ರ ಮಧ್ಯರಾತ್ರಿಯ ಸುಮಾರಿಗೆ ಸಿದ್ದಾಪುರ ಪ್ರದೇಶಕ್ಕೆ ಧಾವಿಸಿದರು. ಅಲ್ಲಿ ದೆಹಲಿ ನೋಂದಣಿ ಸಂಖ್ಯೆಯ ಮಹೀಂದ್ರಾ ಎಕ್ಸ್‌ಯುವಿ ಮತ್ತು ಆಂಧ್ರಪ್ರದೇಶ ನೋಂದಣಿ ಹೊಂದಿರುವ ಮಹೀಂದ್ರಾ ಬೊಲೆರೊ ಹೋಟೆಲ್ ಬಳಿ ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ.
ವಾಹನಗಳಿಂದ ನಾಲ್ವರನ್ನು ಬಂಧಿಸಲಾಯಿತು ಮತ್ತು ತಪಾಸಣೆಯ ಸಮಯದಲ್ಲಿ ಕೊಳೆತ ಈರುಳ್ಳಿ ತುಂಬಿದ ಚೀಲಗಳು ಕಂಡುಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಹೆಚ್ಚಿನ ಪರಿಶೀಲನೆ ನಡೆಸಿದಾಗ, ಚೀಲಗಳ ಒಳಗೆ ಶ್ರೀಗಂಧದ ಮರದ ದಿಮ್ಮಿಗಳನ್ನು ಮರೆಮಾಡಿರುವುದು ಕಂಡುಬಂದಿತು" ಎಂದು ಅಧಿಕಾರಿ ಹೇಳಿದ್ದಾರೆ.
"ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಅಕ್ರಮ ಮಾರಾಟಕ್ಕಾಗಿ ಶ್ರೀಗಂಧದ ಮರದ ದಿಮ್ಮಿಗಳನ್ನು ತಂದಿದ್ದಾಗಿ ಒಪ್ಪಿಕೊಂಡರು" ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಅರಣ್ಯ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement