
ಬೆಂಗಳೂರು: ಮಾನವ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ ಜಾತ್ಯತೀತ ಮತ್ತು ಧರ್ಮಾತೀತವಾಗಿ ಕರ್ನಾಟಕವನ್ನು ನಿರ್ಮಿಸಲು ಮೈಸೂರು ರಾಜರು ಮತ್ತು ಅರಸು ಸಮುದಾಯದ ಕೊಡುಗೆಯನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ಶ್ಲಾಘಿಸಿದರು.
ಅರಮನೆ ಮೈದಾನದಲ್ಲಿ ನಡೆದ ಅರಸು ಸಂಘದ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಅರಸು ಸಮುದಾಯವು ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ, ಈ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆ ಬಹುದೊಡ್ಡದು. ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪರಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಅವರು ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಂಬಾಡಿ ಕಟ್ಟೆ, ವಾಣಿವಿಲಾಸ ಸಾಗರ ಅಣೆಕಟ್ಟು, ಜೆ.ಸಿ ಎಂಜಿನಿಯರ್ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆ ಹೀಗೆ ಹಲವಾರು ಜನೋಪಕಾರಿ ಕೆಲಸಗಳಿಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರು ಅರಸರು ಎಂದು ಹೇಳಿದರು.
ವಿದ್ಯುತ್ ಉತ್ಪಾದನೆ ಸೇರಿದಂತೆ ರಾಜ್ಯದ ಪ್ರಮುಖ ಸಂಸ್ಥೆಗಳ ಸ್ಥಾಪನೆಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರಿನ ಒಡೆಯರು. ಅವರು ನೆಟ್ಟಿರುವ ಮರದ ಫಲವನ್ನು ನಾವೆಲ್ಲರೂ ತಿನ್ನುತ್ತಿದ್ದೇವೆ ಎಂದು ಕೊಂಡಾಡಿದರು.
ಅರಸು ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ಇತರೇ ಅನುಕೂಲಗಳನ್ನು ಕಲ್ಪಿಸಿಕೊಡಬೇಕು ಎಂದು ಮುಖಂಡರು ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಸಂಘಕ್ಕೆ ನಿವೇಶನ ಬೇಕು ಎಂದು ಮನವಿ ಸಲ್ಲಿಸಿದ್ದೀರಿ. ನಾನು ಬೆಂಗಳೂರು ಅಭಿವೃದ್ಧಿಯ ಜವಾಬ್ದಾರಿ ಹೊತ್ತಿದ್ದೇನೆ. ಆದ ಕಾರಣ ಸಂಘದ ಪ್ರಮುಖರು ಹಾಗೂ ರಾಜ ವಂಶಸ್ಥರ ಜೊತೆಯಲ್ಲಿ ಚರ್ಚೆ ಮಾಡಿ ನಿಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
Advertisement