
ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶೇ. 50 ರಷ್ಟು ರಿಯಾಯಿತಿ ಘೋಷಿಸಿದ್ದು, ಇದೀಗ ಒಂದೇ ವಾರದಲ್ಲಿ ಬರೋಬ್ಬರಿ 28 ಕೋಟಿಗೆ ಹೆಚ್ಚು ದಂಡ ಸಂಗ್ರಹವಾಗಿದೆ.
ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ಶೇ. 50 ರಷ್ಟು ದಂಡ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಅದರಂತೆ ಕಳೆದ 8 ದಿನದಲ್ಲಿ ಒಟ್ಟು 10,31,399 ಕೇಸ್ ಗಳನ್ನು ವಿಲೇವಾರಿ ಮಾಡಿ 28 ಕೋಟಿ 52 ಲಕ್ಷ 84 ಸಾವಿರ 600 ರೂ. ದಂಡ ಸಂಗ್ರಹ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೂ ಹತ್ತು ದಿನಗಳ ಕಾಲ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಅವಕಾಶವಿದ್ದು, ಸುಮಾರು 50 ಕೋಟಿಯಷ್ಟು ದಂಡ ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ 2023ರ ಫೆಬ್ರವರಿ 11ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಮತ್ತೊಮ್ಮೆ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ.
ಬಹಳ ವರ್ಷಗಳಿಂದ ಟ್ರಾಫಿಕ್ ದಂಡ ಕಟ್ಟದೇ ಹಾಗೇ ಬಾಕಿ ಉಳಿಸಿಕೊಂಡವರಿಗೆ ಈ ಆಫರ್ ನೀಡಲಾಗಿದೆ. ಇನ್ನುಳಿದಂತೆ 2023ರ ಫೆಬ್ರವರಿ 12ರ ನಂತರದ ಕೇಸ್ ಗಳಿಗೆ ಮುಂದಿನ ವರ್ಷ ಆಫರ್ ನೀಡುವ ಸಾಧ್ಯತೆಗಳಿವೆ.
Advertisement