ಸರ್ಕಾರಿ ಕೆಲಸಗಳಿಗೆ ಬಾಡಿಗೆ ಹೆಲಿಕಾಪ್ಟರ್ ಬಳಕೆಗೆ ನಿರ್ಧಾರ: ಶೀಘ್ರದಲ್ಲೇ ಟೆಂಡರ್..!

ಟೆಂಡರ್‌ಗಳನ್ನು ಆಹ್ವಾನಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದು, ಹೀಗಾಗಿ ಇತರ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
helicopter services
ಹೆಲಿಕಾಪ್ಟರ್ANI
Updated on

ಬೆಂಗಳೂರು: ಸರ್ಕಾರಿ ಅಧಿಕೃತ ಕೆಲಸಗಳಿಗೆ ಹೆಲಿಕಾಪ್ಟರ್ ಮತ್ತು ವಿಮಾನಗಳ ಬಳಕೆ ಕುರಿತು ಕಟ್ಟುನಿಟ್ಟಿನ ಮಾನದಂಡ ರೂಪಿಸಿ ಟೆಂಡರ್ ಮೂಲಕವೇ ಹೆಲಿಕಾಪ್ಟರ್‌ ಹಾಗೂ ವಿಮಾನಗಳ ಸೇವೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹೆಲಿಕಾಪ್ಟರ್‌ ಹಾಗೂ ವಿಮಾನ ಬಳಕೆ ಕುರಿತು ನಿರ್ದಿಷ್ಟ ಮಾನದಂಡ ರೂಪಿಸುವ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಜತೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಸಭೆ ನಡೆಸಿದರು.

ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಡಿಕೆ.ಶಿವಕುಮಾರ್ ಅವರು, ಈ ಸಂಬಂಧ ಹಲವಾರು ವರ್ಷಗಳಿಂದ ಸರ್ಕಾರದ ಮುಂದೆ ಪ್ರಸ್ತಾವನೆ ಬಾಕಿ ಇದೆ. ಇದಕ್ಕಾಗಿ ಟೆಂಡರ್‌ಗಳನ್ನು ಆಹ್ವಾನಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರೂ ಸೂಚನೆ ನೀಡಿದ್ದಾರೆ. ಹೀಗಾಗಿ ಇತರ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.

ಹೆಲಿಕಾಪ್ಟರ್‌ಗಳು ಮತ್ತು ವಿಶೇಷ ಜೆಟ್‌ಗಳನ್ನು ಈಗ ಗಂಟೆಯ ಆಧಾರದ ಮೇಲೆ ಬಾಡಿಗೆಗೆ ಪಡೆಯಲಾಗುತ್ತಿದ್ದು, ಸಭೆಯಲ್ಲಿ, ಗಂಟೆಯ ಆಧಾರದ ಬದಲಿಗೆ ಗುತ್ತಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಬಾಡಿಗೆಗೆ ಪಡೆಯಲು ಟೆಂಡರ್‌ಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಸಚಿವರ ರಾಜ್ಯ ಪ್ರವಾಸಕ್ಕಾಗಿ ಸರ್ಕಾರವು ಗಂಟೆಗೆ 1 ಲಕ್ಷ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ಬಾಡಿಗೆಗೆ ಪಡೆಯುತ್ತಿದೆ. ದೆಹಲಿ ಭೇಟಿಗಳಿಗಾಗಿ ಹೆಚ್ಚಾಗಿ ವಾಣಿಜ್ಯ ವಿಮಾನಗಳನ್ನು ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಸಚಿವರ ಪ್ರಯಾಣವನ್ನು ಆರಾಮದಾಯಕವಾಗಿರಲು ಸರ್ಕಾರ ಮುಂದಾಗಿದೆ.

helicopter services
ಈಗಿನ ಕಾಂಗ್ರೆಸ್ ಅಡಳಿತಾವಧಿಯಲ್ಲೇ ಡಿಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ವಿನಯ್ ಗುರೂಜಿ ಭವಿಷ್ಯ

ಏತನ್ಮಧ್ಯೆ ಆರು ವರ್ಷಗಳ ಹಿಂದೆ ಗುಜರಾತ್ ಸರ್ಕಾರವು ಸುಮಾರು 190 ಕೋಟಿ ರೂ.ಗೆ ಬಾಂಬಾರ್ಡಿಯರ್ ಚಾಲೆಂಜರ್ 650 ವಿಮಾನವನ್ನು ಖರೀದಿಸಿದಂತೆ, ಕರ್ನಾಟಕವು ಸುಮಾರು 80 ಕೋಟಿ ರೂ.ಗೆ ಸ್ವಂತ ಹೆಲಿಕಾಪ್ಟರ್ ಅಥವಾ ಸುಮಾರು 150 ಕೋಟಿ ರೂ.ಗೆ ಜೆಟ್ ಖರೀದಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಉತ್ತರಪ್ರದೇಶ ಸರ್ಕಾರವು ಸೂಪರ್ ಕಿಂಗ್ ಏರ್ ಬಿ 250 ವಿಮಾನ ಮತ್ತು ಕೆಲವು ಹೆಲಿಕಾಪ್ಟರ್‌ಗಳನ್ನು ಹೊಂದಿದೆ, ಹರಿಯಾಣ ಇತ್ತೀಚೆಗೆ 80 ಕೋಟಿ ರೂ.ಗೆ ವಿಮಾನವನ್ನು ಖರೀದಿಸಿದೆ ಎಂದು ತಿಳಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾತನಾಡಿ “ಸೋಮವಾರದ ಸಭೆಯಲ್ಲಿ ಕೆಟಿಪಿಪಿ ಕಾಯ್ದೆಯಡಿ ಹೆಲಿಕಾಪ್ಟರ್ ಅನ್ನು ನೇಮಿಸಿಕೊಳ್ಳುವ ಬಗ್ಗೆ ಮಾತ್ರ ಚರ್ಚಿಸಲಾಗಿದೆಯೇ ಹೊರತು ವಿಮಾನವನ್ನು ಖರೀದಿಸುವ ಬಗ್ಗೆ ಚರ್ಚಿಸಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಕಾರ್ಯದರ್ಶಿ ದರ್ಜೆಯ ಮತ್ತೊಬ್ಬ ಅಧಿಕಾರಿ ಮಾತನಾಡಿ, “ಸಭೆಯಲ್ಲಿ ವಿವಿಐಪಿಗಳ ಸುರಕ್ಷತೆ, ಪಾರದರ್ಶಕತೆ ಮತ್ತು ಭದ್ರತೆಯ ಬಗ್ಗೆ ಹೆಚ್ಚು ಚರ್ಚಿಸಲಾಗಿದೆ. ವಾಯು ಅಪಘಾತಗಳಲ್ಲಿ ನಾವು ಅನೇಕ ವಿವಿಐಪಿಗಳನ್ನು ಕಳೆದುಕೊಂಡಿದ್ದೇವೆ. ಸೋಮವಾರದ ಸಭೆಯಲ್ಲಿ ಎಲ್ಲಾ ಸುರಕ್ಷತಾ ನಿಯಮಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ವಿವಿಐಪಿಗಳ ಉತ್ತಮ ಸುರಕ್ಷತೆ ಕ್ರಮಗಳ ಕುರಿತಂತೆ ಚರ್ಚಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಒಂದು ದಶಕದ ಹಿಂದೆ, ರಾಜ್ಯ ಸರ್ಕಾರವು ಯುರೋಕಾಪ್ಟರ್ ಡೌಫಿನ್ N3 ಅನ್ನು ಖರೀದಿಸಿತ್ತು. ಈ ಹೆಚ್ಚಿನ ಧೂಳನ್ನು ಸಂಗ್ರಹಿಸಿದ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಅದನ್ನು ಮಾರಾಟ ಮಾಡಲಾಗಿತ್ತು. ತಿಂಗಳಿಗೆ ಸುಮಾರು 25 ಗಂಟೆಗಳ ಕಾಲವಾದರೂ ಹೆಲಿಕಾಪ್ಟರ್ ಬಳಸದಿದ್ದರೆ, ಅದರ ಖರೀದಿ ಪ್ರಯೋಜನ ನೀಡುವುದಿಲ್ಲ. ಬಾಡಿಗೆಗೆ ಹೆಲಿಕಾಪ್ಟರ್ ತೆಗೆದುಕೊಳ್ಳುವುದು ಕಡಿಮೆ ಹೊರೆಯಾಗಬಹುದು ಎಂದು ಕ್ಯಾಪ್ಟನ್ ಅರವಿಂದ್ ಶರ್ಮಾ ಹೇಳಿದ್ದಾರೆ.

ಹೆಲಿಕಾಪ್ಟರ್ ಖರೀದಿ ಸರ್ಕಾರಕ್ಕೆ ಕೆಲ ಸವಾಲುಗಳನ್ನೂ ಎದುರು ಮಾಡಲಿದೆ. ಅದರ ನಿರ್ವಹಣೆ ಹೊರೆಯಾಗಬಹುದು. 1990 ಮತ್ತು 2000 ರ ಆರಂಭದಲ್ಲಿ ಕರ್ನಾಟಕವು ಡೌಫಿನ್ ಹೆಲಿಕಾಪ್ಟರ್ ಅನ್ನು ಹೊಂದಿತ್ತು. ಆದರೆ, ಹೆಲಿಕಾಪ್ಟರ್ ಹಾನಿಗೊಳಗಾಯಿತು. ನವದೆಹಲಿಗೆ 20 ಕ್ಕೂ ಹೆಚ್ಚು ದೈನಂದಿನ ವಿಮಾನಗಳಿರುವಾಗ ಜೆಟ್ ಅನ್ನು ಹೊಂದುವುದು ಅರ್ಥಹೀನ ಎಂಬುದು ನನ್ನ ವೈಯಕ್ತಿಕ ಅಭಿಪ್ರಪಾಯ ಎಂದು ತಿಳಿಸಿದ್ದಾರೆ.

ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರತಿಕ್ರಿಯಿಸಿ, ಜನರು ಮೂಲಭೂತ ಸೌಕರ್ಯಗಳಿಗಾಗಿ ಹೆಣಗಾಡುತ್ತಿದ್ದು, ಈ ಸಮಯದಲ್ಲಿ ರಾಜ್ಯ ಸರ್ಕಾರ ಸಚಿವರ ವಿಮಾನ ಪ್ರಯಾಣಕ್ಕೆ ಆದ್ಯತೆ ನೀಡಬೇಕೇ? ಎಂದು ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com