
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು ಮೊದಲ ಬಾರಿಗೆ ಒಂದೇ ರೀತಿಯ ಆಹಾರ ಪದ್ಧತಿಯ ಬದಲು ರೋಗಿಗಳಿಗೆ ಅವರ ವೈದ್ಯಕೀಯ ಆರೈಕೆ ಅಗತ್ಯಗಳಿಗೆ ಅನುಗುಣವಾಗಿ ಆಹಾರವನ್ನು ನೀಡಲಿದೆ.
ಇಲ್ಲಿಯವರೆಗೆ, ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಇತರ ರೋಗಿಗಳಂತೆಯೇ ಸಾಮಾನ್ಯ ಆಹಾರವನ್ನು ನೀಡಲಾಗುತ್ತಿತ್ತು. ಇದು ಅವರ ನಿರ್ದಿಷ್ಟ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಪರಿಹರಿಸಲು, ಆರೋಗ್ಯ ಇಲಾಖೆ, ಇಸ್ಕಾನ್ ದೇವಸ್ಥಾನ ಜೊತೆಗಿನ ಸಹಭಾಗಿತ್ವದಲ್ಲಿ, ಆಸ್ಪತ್ರೆಯ ಆಹಾರ ವ್ಯವಸ್ಥೆಯನ್ನು ಪರಿಷ್ಕರಿಸಿ ಐದು ಪ್ರತ್ಯೇಕ ಆಹಾರ ಯೋಜನೆಗಳನ್ನು ಪರಿಚಯಿಸಿದೆ. ಸಾಮಾನ್ಯ, ಚಿಕಿತ್ಸಕ, ಗರ್ಭಧಾರಣೆ, ಪ್ರಸವಪೂರ್ವ ಮತ್ತು ಮಕ್ಕಳಿಗೆ ಆಹಾರವನ್ನು ಪೂರೈಸಲಿದೆ.
ಮೊದಲ ಹಂತದಲ್ಲಿ, ಈ ಉಪಕ್ರಮವು ಬೆಂಗಳೂರಿನ ಮೂರು ಪ್ರಮುಖ ಆಸ್ಪತ್ರೆಗಳಾದ ಸರ್ ಸಿ ವಿ ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಮತ್ತು ಕೆಸಿ ಜನರಲ್ ಆಸ್ಪತ್ರೆಗಳನ್ನು ಒಳಗೊಳ್ಳುತ್ತದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಹೊಸ ಆಹಾರ ಯೋಜನೆ ಉಪಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿ ಆಸ್ಪತ್ರೆಯಲ್ಲಿ ಸುಮಾರು 250 ರೋಗಿಗಳಿಗೆ ದೈನಂದಿನ ಊಟವನ್ನು ಒದಗಿಸಲು ಇಸ್ಕಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ರೋಗಿಗಳಿಗೆ ಉಪಹಾರ, ಬೆಳಗ್ಗೆ ಮತ್ತು ಸಂಜೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುವುದು. ಮುಂದಿನ ಒಂಬತ್ತು ತಿಂಗಳುಗಳಲ್ಲಿ ಈ ಕಾರ್ಯಕ್ರಮಕ್ಕಾಗಿ ಆರೋಗ್ಯ ಇಲಾಖೆ 1.37 ಕೋಟಿ ರೂಪಾಯಿ ನೀಡಿದೆ.
ಈ ಬಗ್ಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂ ರಾವ್, ಆಹಾರ ಯೋಜನೆಗಳು ರೋಗಿಗಳು ಬೇಗನೆ ಚೇತರಿಸಿಕೊಳ್ಳಲು ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ರೂಪುಗೊಳಿಸಲಾಗಿದೆ.
ಗರ್ಭಿಣಿಯರಿಗೆ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವನ್ನು ನೀಡಲಾಗುವುದು. ಬಾಣಂತಿಯರಿಗೆ ಹಾಲು ಉತ್ಪಾದನೆ ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವ ಆಹಾರವನ್ನು ನೀಡಲಾಗುವುದು, ಮಕ್ಕಳಿಗೆ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೌಷ್ಟಿಕ-ಭರಿತ ಆಹಾರವನ್ನು ನೀಡಲಾಗುವುದು. ಈ ಕಾರ್ಯಕ್ರಮ ಯಶಸ್ವಿಯಾದರೆ, ರಾಜ್ಯದಾದ್ಯಂತದ ಇತರ ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಆಹಾರಗಳು
ರವಾ ಉಪ್ಮಾ
ಪೊಂಗಲ್
ಗೋಧಿ ಗಂಜಿ
ರಾಗಿ ಉಂಡೆಗಳು
ಚಪಾತಿ, ಅನ್ನ
ಸಾಂಬಾರ್
ತರಕಾರಿಗಳು
ಸೋಯಾ
ಹಾಲು
ಹಣ್ಣುಗಳು
ಮಜ್ಜಿಗೆ
ಚಿಕ್ಕಿ
Advertisement