
ಬೆಂಗಳೂರು: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಅಪಾರ ಹಾನಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಲು ಬಿಜೆಪಿ ಮುಂದಾಗಿದೆ.
ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದು, ಸೆಪ್ಟೆಂಬರ್ 8 ರೊಳಗೆ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ, ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಚಿವರು ಹಾನಿಯನ್ನು ನಿರ್ಣಯಿಸಲು ಅಥವಾ ಪರಿಹಾರ ನೀಡಲು ಸಜ್ಜಾಗಿಲ್ಲ. ಆಸ್ತಿ ಮತ್ತು ಬೆಳೆ ಕಳೆದುಕೊಂಡ ಜನರಿಗೆ ಸಾಂತ್ವನ ಹೇಳಲು ಕೂಡ ಮುಂದಾಗಿಲ್ಲ. ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿದೆ.
ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯಾದ್ಯಂತ ಪ್ರಯಾಣಿಸಿದ್ದಲ್ಲದೆ, ರಾಜ್ಯ ಸರ್ಕಾರದಿಂದ ರೈತರಿಗೆ ಎರಡು ಪಟ್ಟು ಪರಿಹಾರ ಸಿಗುವಂತೆ ನೋಡಿಕೊಂಡರು. ಆದರೆ, ಪ್ರಸ್ತುತ ಆಡಳತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವು ರೈತರ ಬಗ್ಗೆ ಅವರ ಮನೋಭಾವವನ್ನು ತೋರಿಸುತ್ತದೆ.
ಈ ಹಿನ್ನೆಲೆಯಲ್ಲಿ ಸಂಕಷ್ಟದ ಸಮಯದಲ್ಲಿ ಮೈಮರೆತು ಗಾಢ ನಿದ್ರೆಯಲ್ಲಿರುವ ಸರ್ಕಾರವನ್ನು ಪ್ರತಿ ಪಕ್ಷ ಬಿಜೆಪಿ ಎಚ್ಚರಿಸುವ ಕೆಲಸ ಮಾಡಬೇಕು. ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಜನರ ಸಂಕಷ್ಟವನ್ನು ಆಲಿಸಬೇಕು. ಹಾನಿಗೊಳಗಾದ ಬೆಳೆ, ಸಾವು–ನೋವು, ರಸ್ತೆಗಳ ಸ್ಥಿತಿ ಸೇರಿದಂತೆ ಎಲ್ಲ ವಿವರಗಳನ್ನು ಚಿತ್ರಸಹಿತ ಪಟ್ಟಿ ಮಾಡಿ, ಸೆಪ್ಟೆಂಬರ್ 8 ರೊಳಗೆ ಬೆಂಗಳೂರಿನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
Advertisement