
ಬೆಂಗಳೂರು: ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ, ಚಿಂತಿಸಬೇಡ ಎಂದು ಮಹಿಳಾ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಉಡಾಫೆಯಿಂದ ಉತ್ತರಕೊಟ್ಟ ಶಾಸಕ ಆರ್ ವಿ ದೇಶಪಾಂಡೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿವೆ.
ದೇಶಪಾಂಡೆಯವರ ಹೇಳಿಕೆಗೆ ವಿರೋಧ ಪಕ್ಷಗಳು ಮತ್ತು ಪತ್ರಕರ್ತರ ಸಂಘಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ದೇಶಪಾಂಡೆಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ, ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆ ಸಮಸ್ಯೆ ಕುರಿತು ಪ್ರಶ್ನೆ ಕೇಳಿದ ಮಹಿಳಾ ಪತ್ರಕರ್ತೆಗೆ ನಿನ್ನ ಹೆರಿಗೆ ಬೇರೆ ಕಡೆ ಮಾಡಿಸುವುದಾಗಿ ಉಡಾಫೆಯ ಉತ್ತರವನ್ನು ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕರಾದ ಆರ್. ವಿ. ದೇಶಪಾಂಡೆ ನೀಡಿದ್ದಾರೆ. ಶಾಸಕರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರ ವಿಚಾರದಲ್ಲಿ ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆ ವ್ಯಕ್ತವಾಗುತ್ತಿದೆ. ಸಮಸ್ಯೆ ಹೇಳಿಕೊಂಡು ಬರುವ ಮಹಿಳೆಯರ ದುಪಟ್ಟಾ ಎಳೆಯುವ ಮುಖ್ಯಮಂತ್ರಿ ಒಂದೆಡೆಯಾದರೆ, ಸಮಸ್ಯೆ ಕುರಿತು ಪ್ರಶ್ನಿಸುವ ಮಹಿಳಾ ಪತ್ರಕರ್ತರಿಗೆ ಉಡಾಫೆಯ ಉತ್ತರ ನೀಡುವ ಕೈ ಶಾಸಕರು ಮತ್ತೊಂದೆಡೆ. ರಾಜ್ಯದಲ್ಲಿ ಮೂಲಭೂತ ಅವಶ್ಯಕತೆಗಳನ್ನು ಕೇಳೋದು ತಪ್ಪಾ? ಅಸಭ್ಯವಾಗಿ ಉತ್ತರ ನೀಡಿದ ಕಾಂಗ್ರೆಸ್ ಶಾಸಕರು ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಗರ್ಭಿಣಿಯರು ಸೂಕ್ತ ಆಸ್ಪತ್ರೆಯಿಲ್ಲದೆ ದಾರುಣ ಸ್ಥಿತಿ ಎದುರಿಸುತ್ತಿದ್ದು ಈ ಸಂಬಂಧ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆಯ ಬಗ್ಗೆ ಮಾಧ್ಯಮ ಸಹೋದರಿಯೊಬ್ಬರು ಮಾಜಿ ಸಚಿವರು ಹಾಗೂ ಅತ್ಯಂತ ಹಿರಿಯ ಶಾಸಕರಾದ ಆರ್.ವಿ ದೇಶಪಾಂಡೆ ಅವರಲ್ಲಿ ಗಮನ ಸೆಳೆದ ಸಂದರ್ಭದಲ್ಲಿ ಮಾನ್ಯ ದೇಶಪಾಂಡೆ ಅವರು ಆಡಿರುವ ಮಾತು ಅವರ ವಯಸ್ಸು, ಅನುಭವ ಹಾಗೂ ಘನತೆಗೆ ತಕ್ಕುದ್ದಲ್ಲವಾಗಿದೆ. ಸ್ತ್ರೀ ಕುಲವನ್ನು ಅವಹೇಳನ ಮಾಡುವ ರೀತಿಯಲ್ಲಿ ಉದ್ಘರಿಸಿರುವ ಅವರ ಮಾತು ನಾಗರಿಕ ಸಮಾಜ ಎಂದಿಗೂ ಒಪ್ಪಲಾಗದು. ಈ ಸಂಬಂಧ ಆರ್.ವಿ.ದೇಶಪಾಂಡೆ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡು, ಮಹಿಳಾ ಸಮುದಾಯದ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗ್ಡೆ ಅವರು ಪ್ರತಿಕ್ರಿಯೆ ನೀಡಿ, ಜಿಲ್ಲಾ ಮಹಿಳಾ ಘಟಕದ ಸದಸ್ಯರು ಶುಕ್ರವಾರ ಹಳಿಯಾಳದಲ್ಲಿ ದೇಶಪಾಂಡೆ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಿದ್ದು, ಬೆಂಗಳೂರಿನ ಪಕ್ಷದ ಕಾರ್ಯಕರ್ತರು ಸಹ ಭಾಗವಹಿಸಲಿದ್ದಾರೆಂದು ಹೇಳಿದ್ದಾರೆ.
ಕರ್ನಾಟಕ ಮಹಿಳಾ ಪತ್ರಕರ್ತರ ಸಂಘ ಖಂಡನೆ
ಈ ನಡುವೆ ದೇಶಪಾಂಡೆಯವರ ಹೇಳಿಕೆಗೆ ಕರ್ನಾಟಕ ಮಹಿಳಾ ಪತ್ರಕರ್ತರ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಮಹಿಳಾ ಪತ್ರಕರ್ತೆಯರಿಗೆ ಮತ್ತು ಮಾಧ್ಯಮ ಸಮುದಾಯಕ್ಕೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ಇದೇ ವೇಳೆ ಸಾರ್ವಜನಿಕ ಜೀವನದಲ್ಲಿರುವವರು ಘನತೆ, ಗೌರವ ಮತ್ತು ಸಭ್ಯತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಶಾಸಕರು ಮತ್ತು ನಾಯಕರಿಗೆ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ.
ಪತ್ರಕರ್ತರು ಕೇಳುವ ಪ್ರತಿಯೊಂದು ಪ್ರಶ್ನೆಯೂ ಮೇಲೆ ರಾಜ್ಯದ ಜನರ ಕಳವಳಗಳನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಚುನಾಯಿತ ಪ್ರತಿನಿಧಿಗಳು ನೆನಪಿನಲ್ಲಿಡಬೇಕು. ಪತ್ರಕರ್ತಕನ್ನು ಕೀಳಾಗಿ ನೋಡುವುದು, ನಿರ್ಲಕ್ಷಿಸುವುದು, ಅವಮಾನಿಸುವುದು ಶಾಸಕರನ್ನು ಅಧಿಕಾರಕ್ಕೆ ತಂದ ಜನರನ್ನುಕಡೆಗಣಿಸಿದಂತೆ ಎಂದು ತಿಳಿಸಿದೆ.
ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಲಾಗಿದೆ: ದೇಶಪಾಂಡೆ
ಈ ನಡುವೆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ದೇಶಪಾಂಡೆಯವರು, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ನನಗೆ ಆ ಮಹಿಳಾ ಪತ್ರಕರ್ತೆಯ ಪರಿಚಯ ಹಲವು ವರ್ಷಗಳಿಂದ ಇದೆ. ಪರಿಚಯ ಹಿನ್ನೆಲೆ ಸಾಮಾನ್ಯವಾಗಿ ಹೇಳಿದ್ದೆ. ನಾನು ಮಹಿಳೆಯನ್ನು ಅತ್ಯಂತ ಗೌರವದಿಂದ ನೋಡುವ ವ್ಯಕ್ತಿ. ಆ ಮಹಿಳಾ ಪತ್ರಕರ್ತೆ ಗಣೇಶಗುಡಿಯವರು. ನನಗೆ ಅವರ ಬಗ್ಗೆ ಚೆನ್ನಾಗಿ ಗೊತ್ತು. ನಾನು ಅವರ ಜೊತೆ ಗೌರವದಿಂದ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆಯನ್ನು ಬಿಜೆಪಿಯವರು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆಂದು ತಿಳಿಸಿದ್ದಾರೆ.
Advertisement