
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳು ಮತ್ತು ಅಕ್ರಮ ನಿವೇಶನದಾರರ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳುವ ಜೊತೆಗೆ, ಮುಡಾಗೆ ಉಂಟಾಗಿರುವ ಆರ್ಥಿಕ ನಷ್ಟ ವಸೂಲಿಗೆ ಕ್ರಮ ಕೈಗೊಳ್ಳುವುದು ಸೇರಿ ನ್ಯಾ.ಪಿ.ಎನ್. ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗ ಮಾಡಿರುವ ಶಿಫಾರಸು ಅನುಷ್ಠಾನಕ್ಕೆ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಆಯೋಗದ ವರದಿ ಹೇಳಿದ್ದು, ಕ್ಲೀನ್ ಚಿಟ್ ನೀಡಿದೆ.
ಅಕ್ರಮದ ಮೂಲಕ ಮುಡಾ ಸಂಸ್ಥೆಗೆ ಅಧಿಕಾರಿಗಳು, ಸರ್ವೇಯರ್, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಂದ ನಷ್ಟ ಉಂಟಾಗಿದೆ. ಅದರಲ್ಲೂ 2020ರ ಮೇ ತಿಂಗಳಿನಿಂದ 2024ರ ಜುಲೈವರೆಗಿನ ಆಯುಕ್ತರು, ಸರ್ವೇಯರ್, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಗೆ ಅಕ್ರಮ ಹಂಚಿಕೆ ಸಾಕಷ್ಟಿವೆ ಎಂದು ಆಯೋಗ ತನ್ನ ಶಿಫಾರಸಿನಲ್ಲಿ ತಿಳಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದೆ. ಇದನ್ನು ಸರ್ಕಾರ ಒಪ್ಪಿದ್ದು, ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಪರ್ಯಾಯ ನಿವೇಶನ ಪಡೆದ ಆರೋಪದಹಿನ್ನೆಲೆಯಲ್ಲಿ ಮುಡಾದಲ್ಲಿ ದೊಡ್ಡ ಪ್ರಮಾಣದಲ್ಲಿ ಇತರೆ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜುಲೈ, 2024 ರಲ್ಲಿ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ಏಕ ಸದಸ್ಯ ವಿಚಾರಣಾ ಆಯೋಗ ನೇಮಿಸಲಾಗಿತ್ತು.
ಆಯೋಗವು 2006ರಿಂದ 2024ರ ಜು.15ರವರೆಗಿನ 19 ವರ್ಷಗಳ ಅವಧಿಯಲ್ಲಿ ಮುಡಾದಿಂದ ನಡೆದಿರುವ ನಿವೇಶನಗಳ ಹಂಚಿಕೆ ಕುರಿತು ಪರಿಶೀಲನೆ ನಡೆಸಿ, ಜುಲೈ 31, 2025 ರಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು
ವರದಿಯಲ್ಲಿ ಮುಡಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಸೂಚಿಸಿರುವ ಆಯೋಗ, ಯಾವೆಲ್ಲ ಅಂಶಗಳು ತಪ್ಪಾಗಿದ್ದು, ಅದಕ್ಕೆ ಏನು ಕ್ರಮ ಕೈಗೊಳ್ಳಬೇಕೆಂಬ ಕುರಿತು 80 ಅಂಶಗಳ ಶಿಫಾರಸು ಮಾಡಿದೆ.
ವಿಚಾರಣಾ ಆಯೋಗವು ಒಟ್ಟು 8 ಅಂಶಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿದ್ದು, ಅದರಲ್ಲಿ ಅಧಿಕಾರಿಗಳು, ಸರ್ವೇಯರ್, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಂದ ಅಕ್ರಮಗಳು ನಡೆದಿವೆ ಎಂದು ಉಲ್ಲೇಖಿಸಿದೆ. ಅದರಲ್ಲೂ 2020ರ ಮೇ ತಿಂಗಳಿನಿಂದ 2024ರ ಜುಲೈವರೆಗಿನ ಆಯುಕ್ತರು, ಸರ್ವೇಯರ್, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಗೆ ಅಕ್ರಮ ಹಂಚಿಕೆ ಸಾಕಷ್ಟಿವೆ ಎಂದು ತಿಳಿಸಿದೆ.
ಜೊತೆಗೆ ಹಂಚಿಕೆ ಮಾಡಲಾದ ನಿವೇಶನ ಭೌತಿಕವಾಗಿ ಲಭ್ಯವಿಲ್ಲ. ವಾಸಿಸಲು ಅನುಕೂಲಕರವಾಗಿಲ್ಲ ಸ್ಮಶಾನದ ಪಕ್ಕ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಕಾರಣಗಳನ್ನು ನೀಡಿ ಮುಡಾದಿಂದಪರ್ಯಾಯನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಮುಡಾಕ್ಕೆ ಆರ್ಥಿಕ ನಷ್ಟವುಂಟಾಗಿದೆ. ಅದರ ಜತೆ ಕೆಲ ಪ್ರಕರಣಗಳಲ್ಲಿ ದಶಕಗಳ ನಂತರ ನಕಲಿ ಹಕ್ಕು ಸಾಧಿಸಿ ನಿವೇಶನ ರೂಪದಲ್ಲಿ ಪರಿಹಾರ ಕೇಳಿರುವುದು, ನಿವೇಶನಗಳನ್ನೂ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ಆಯೋಗ ಗಮನಿಸಿದ್ದು, ಈ ಕುರಿತು ವರದಿಯಲ್ಲಿ ತಿಳಿಸಿದೆ.
ಹೀಗೆ ಹಲವು ಕಾರಣಗಳಿಂದಾಗಿ ಸಾಕಷ್ಟು ನಷ್ಟವುಂಟಾಗಿದೆ ಹಾಗೂ ಪ್ರತಿ ಹಂತದಲ್ಲೂ ಅಕ್ರಮಗಳು ನಡೆದಿವೆ. ಹೀಗೆ ಮುಡಾಕ್ಕೆ ಆರ್ಥಿಕ ನಷ್ಟವುಂಟು ಮಾಡಿದ ಅಧಿಕಾರಿ, ಸರ್ವೇಯರ್, ಸಿಬ್ಬಂದಿ ಮತ್ತು ಅಕ್ರಮ ಫಲಾನುಭವಿಗಳಿಂದ ನಷ್ಟ ವಸೂಲಿ ಮಾಡಬೇಕು ಹಾಗೂ ನ್ಯಾಯಾಂಗ ಮತ್ತು ಇಲಾಖಾ ವಿಚಾರಗಳನ್ನು ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಇದರಂತೆ ಆಯೋಗ ಮಾಡಿರುವ ಎಲ್ಲ ಶಿಫಾರಸುಗಳನ್ನು ಪರಿಶೀಲಿಸಿ ಅದರಂತೆ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
Advertisement