ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಬದಲು ಬ್ಯಾಲೆಟ್ ಪೇಪರ್ ಬಳಸಲು ರಾಜ್ಯಸರ್ಕಾರದ ನಿರ್ಧಾರ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಮತಪತ್ರ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರೆ ಕಾಂಗ್ರೆಸ್ ಮತಪತ್ರ ಬಳಸುವುದನ್ನು ಸಮರ್ಥಿಸಿಕೊಂಡಿದ್ದು ಕಾನೂನಿನಲ್ಲೇ ಇದಕ್ಕೆ ಅವಕಾಶವಿದೆ ಎಂದಿದೆ. ಬ್ಯಾಲೆಟ್ ಪೇಪರ್ ಬಳಕೆ ಕುರಿತಂತೆ ಆರೋಪ-ಪ್ರತ್ಯಾರೋಪಗಳ ನಡುವೆ ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಬದಲು ಬ್ಯಾಲೆಟ್ ಪೇಪರ್ ಬಳಸಲು ನಾವು ಸಿದ್ಧರಿದ್ದೇವೆ. ಈಗಿರುವ ಕೆಲ ನಿಯಮಗಳಿಗೆ ರಾಜ್ಯಸರ್ಕಾರ ತಿದ್ದುಪಡಿ ಮಾಡಿದರೆ ಮತಪತ್ರಗಳ ಮೂಲಕವೇ ಚುನಾವಣೆ ನಡೆಸಲು ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದೆ. ಮತ ಪತ್ರಗಳ ಬಳಕೆಯಿಂದ ಚುನಾವಣಾ ಅಕ್ರಮವೆಸಗಬಹುದು. ಮತಗಟ್ಟೆಗಳಲ್ಲಿ ದೌರ್ಜನ್ಯ ಮೆರೆಯಬಹುದು, ಎಗ್ಗಿಲ್ಲದೆ ಕಳ್ಳ ಮತದಾನವನ್ನು ಮಾಡಬಹುದು ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ ಬ್ಯಾಲೆಟ್ ಪೇಪರ್ ಆಧರಿಸಿದ ಚುನಾವಣೆಯನ್ನು ರಾಹುಲ್‌ಗಾಂಧಿ ನೇತೃತ್ವದಲ್ಲಿ ಬೆಂಬಲಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.
ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಂದ ಶೇಕಡ 60ರಷ್ಟು ಕಮಿಷನ್ ಪಡೆದಿದ್ದಾರೆ ಎಂಬ ಆರೋಪ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜಿನಾಮೆ ಪತ್ರ ಸಲ್ಲಿಸಿದರು. ಕಮಿಷನ್ ವಸೂಲಿ ಆರೋಪಕ್ಕೆ ಗುರಿಯಾಗಿರುವ ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮವು ಭೂಒಡೆತನ ಯೋಜನೆ ಜಾರಿಗೊಳಿಸಲಾಗಿದ್ದು ಈ ಯೋಜನೆಯಡಿ 60 ಎಕರೆ ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿತ್ತು. ಈ ಫಲಾನುಭವಿಗಳಿಂದ ಶೇಕಡ 60ರಷ್ಟು ಕಮಿಷನ್ ನಿಗದಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಕುರಿತ ವಿಡಿಯೋವೊಂದು ವೈರಲ್ ಆಗಿತ್ತು.
ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಏರ್ ಗನ್ ಟ್ರಿಗರ್ ಅದುಮಿದ ಪರಿಣಾಮ ಗುಂಡು ತಗುಲಿ ಮತ್ತೋರ್ವ ಬಾಲಕ ಮೃತಪಟ್ಟ ಘಟನೆ ಶಿರಸಿಯ ಸೋಮನಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮನಳ್ಳಿಯ ರಾಘವೇಂದ್ರ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ಬಸಪ್ಪ ಉಂಡಿಯರ್ ಎಂಬುವವರ ಇಬ್ಬರು ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಒಂಭತ್ತು ವರ್ಷದ ಕರಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಂಗಗಳ ಹಾವಳಿ ನಿಯಂತ್ರಿಸುವ ಸಲುವಾಗಿ ಗ್ರಾಮಸ್ಥರಿಂದ ನೇಮಕವಾಗಿದ್ದ ನಿತೀಶ ಗೌಡ ಎಂಬಾತ ರಾಘವೇಂದ್ರ ಹೆಗಡೆಗೆ ಸೇರಿದ ಗನ್ ಹಿಡಿದುಕೊಂಡು ಬಸಪ್ಪ ಮನೆ ಬಳಿ ಬಂದಿದ್ದರು. ಈ ವೇಳೆ ಬಾಲಕ ನಿತೀಶ ಗೌಡ ಅವರ ಕೈಯಲ್ಲಿದ್ದ ಏರ್ ಗನ್ ಟ್ರಿಗರ್ ಅದುಮಿದ್ದರಿಂದ ದುರ್ಘಟನೆ ಸಂಭವಿಸಿದೆ.
ಜಾರಿ ನಿರ್ದೇಶನಾಲಯ (ED) ಬಂಧಿಸಿದ ನಂತರ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ತಮ್ಮ ಬೆಂಬಲಿಗರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. 'ರೈತರು, ಭಾಷೆ ಮತ್ತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದವರ ವಿರುದ್ಧದ ಹಲವಾರು ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಬಿಜೆಪಿ ಕೋರಿಕೆ ಮೇರೆಗೆ ನಾವು ಹಲವು ಪ್ರಕರಣಗಳನ್ನು ಹಿಂತೆಗೆದುಕೊಂಡಿದ್ದೇವೆ ಎಂದರು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 60 ಪ್ರಕರಣಗಳನ್ನು ಹಿಂಪಡೆಯಲು ಅನುಮೋದನೆ ನೀಡಿತ್ತು. ಅದರಂತೆ ಬಿಜೆಪಿ, ಕಾಂಗ್ರೆಸ್ ಸದಸ್ಯರು, ಕಾರ್ಯಕರ್ತರು, ರೈತ ಮುಖಂಡರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಯ ಕನ್ನಡ ಕಾರ್ಯಕರ್ತರು ಸೇರಿದಂತೆ ಹಲವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂತೆಗೆದುಕೊಳ್ಳಲಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ. ಸುಮಾರು 10 ಮಹಿಳಾ ಸಂಘಟನೆಗಳು ಹಾಗೂ 40 ಸಾಮಾಜಿಕ ಹೋರಾಟಗಾರ್ತಿಯರು ಪತ್ರ ಬರೆದಿದ್ದು, ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಎಸ್‌ಐಟಿ ತನಿಖೆಯ ಬೆಳವಣಿಗೆ ಬಗ್ಗೆ ಮಹಿಳಾ ಸಂಘಟನೆಗಳು ತೀವ್ರ ಆತಂಕ ಹೊರಹಾಕಿವೆ. ಅಲ್ಲದೇ ಮಾಸ್ಕ್ ಮ್ಯಾನ್ ಚಿನ್ನಯ್ಯನ ಬಂಧನ, ಸುಜಾತ ಭಟ್ ಪ್ರಕರಣ, ತನಿಖೆ ಕುರಿತ ಮಾಧ್ಯಮ ವರದಿಗಳು ಹಾಗೂ ಡಿಸಿಎಂ ಡಿಕೆಶಿ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಮುಖವಾಗಿ ವೇದವಲ್ಲಿ ಪ್ರಕರಣ, ಸೌಜನ್ಯ ಪ್ರಕರಣ ಹಾಗೂ ಪದ್ಮಲತಾ ಸಾವಿನ ತನಿಖೆ ಆಗಬೇಕು. ಇವರನ್ನು ಕೊಂದವರು ಯಾರು ಎಂಬ ಸತ್ಯ ತಿಳಿಯಬೇಕು ಎಂದು ಹೇಳಿದ್ದಾರೆ.
Advertisement