
ಬೆಂಗಳೂರು: ರಾಜ್ಯದಲ್ಲಿ ಸೆ. 15ರಿಂದ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಮತ್ತು 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಯಲಿದೆ.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಯಲಿರುವ ಈ ಸಮೀಕ್ಷೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದ್ದು, ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ನಡೆಯುತ್ತಿರುವುದು ವಿಶೇಷವಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಸಮೀಕ್ಷೆ ನಡೆಯುತ್ತಿದ್ದು, ಮೊದಲ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಯಲಿದೆ.
ಸಮೀಕ್ಷೆಯಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಸಮೀಕ್ಷೆಗಳನ್ನು ನಡೆಸಲಾಗುವುದು. ಈ ಎರಡು ಸಮೀಕ್ಷೆಗಳನ್ನು ಸೆ.15ರಿಂದ ಪ್ರಾರಂಭಿಸಿ, 45 ಕೆಲಸದ ದಿನಗಳಲ್ಲಿ ಮುಕ್ತಾಯಗೊಳಿಸಲಾಗುವುದು.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ ಮತ್ತು ಬಳ್ಳಾರಿ ಸೇರಿದಂತೆ 15 ಜಿಲ್ಲೆಗಳಲ್ಲಿ ಸಮೀಕ್ಷೆಗಳು ನಡೆಯಲಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
ತೃತೀಯ ಲಿಂಗಿಗಳ ಸಮೀಕ್ಷೆಯನ್ನು ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ನಡೆಸಲಾಗುವುದು. ಹಿಂದಿನ ದೇವದಾಸಿಯರ ಮರು ಸಮೀಕ್ಷೆಯನ್ನು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುವುದು.
ಸಮೀಕ್ಷೆ ಕಾರ್ಯ ಕೈಗೊಳ್ಳಲು ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿದ್ದು, Mobile App ಮೂಲಕ ಟ್ರಾನ್ಸ್ ಜೆಂಡರ್ಸ್ ಸಮೀಕ್ಷೆ ಗೆ KARMANI Web Application ಅನ್ನು ಸಿದ್ಧಪಡಿಸಲಾಗಿದೆ. ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆಗೆ ಸೇವಾ ಸಿಂಧು ಮೂಲಕ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ web application ಅನ್ನು ಸಿದ್ಧಪಡಿಸಿದ್ದು, ತನ್ಮೂಲಕ ಪ್ರತ್ಯೇಕವಾಗಿ ಎರಡು ಸಮೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಎರಡು ಸಮೀಕ್ಷೆಯಲ್ಲಿ ಭಾಗವಹಿಸಲು ಸಹಾಯವಾಣಿ ಸಂಖ್ಯೆ 1800 599 2025 ಅನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದೆ.
Advertisement