
ಬೆಂಗಳೂರು: ಸರ್ಕಾರಿ ಶಾಲೆಗಳ ಸ್ಥಾಪನೆ, ಅತ್ಯುತ್ತಮ ಕಟ್ಟಡಗಳನ್ನು ನಿರ್ಮಿಸಿಕೊಡುವ ಕಂಪನಿಗಳ ಹೆಸರನ್ನೇ ಶಾಲೆಗೆ ಇಡಲು ಅನುಮತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಶುಕ್ರವಾರ ಹೇಳಿದೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ, ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಪರಿಹಾರ ತರಬೇಕೆಂದು ಸಿಎಸ್‌ಆರ್ ಪಾಲಿಸಿ ತರಬೇಕೆಂದು ನಾವು ಯೋಜನೆ ರೂಪಿಸುತ್ತಿದ್ದೇವೆ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ, ಸಿಎಸ್‌ಆರ್ ನಿಧಿಯನ್ನು ಬಳಸಿಕೊಂಡು ಶಾಲೆಗಳನ್ನು ನಿರ್ಮಿಸಲು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುವುದು. ಶಾಲೆಗಳ ಕಟ್ಟಡಗಳನ್ನು ಅತ್ಯುತ್ತಮವಾಗಿ ನಿರ್ಮಿಸುವ ಕಂಪನಿಗಳು, ಆ ಶಾಲೆಗಳಿಗೆ ತಮ್ಮ ಬ್ರ್ಯಾಂಡ್ ಹೆಸರಿಡಲು ಅವಕಾಶ ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಪಂಚಾಯತಿ ಮಟ್ಟದಲ್ಲಿ ಸಿಎಸ್‌ಆರ್ ಯೋಜನೆಯಡಿ 2000 ಶಾಲೆಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ʼಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ವರದಿ ಓದಿದೆ. ಸರ್ಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು. ಅದಕ್ಕೆ ನಾವು ಸಿಎಸ್‌ಆರ್ ಹಣದ ತೊಡಗಿಸುವಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ 7,800 ಕೋಟಿಯಷ್ಟು ಹಣವನ್ನು ಸಿಎಸ್‌ಆರ್ ಹಣ ಲಭ್ಯವಿದೆ ಎಂದು ವರದಿಗಳು ಹೇಳುತ್ತವೆ. ಒಂದಷ್ಟು ಜನ ಉದ್ಯಮಿಗಳು ಇನ್ನೂ ಮನಸು ಮಾಡಿಲ್ಲ. ನನ್ನ ಕ್ಷೇತ್ರದಲ್ಲಿ ಕೆಪಿಎಸ್ ಶಾಲೆಗಳ ವಿಚಾರದಲ್ಲಿ ಅತ್ಯುತ್ತಮ ಕೆಲಸವಾಗಿದೆ. ನನ್ನ ಕ್ಷೇತ್ರದಲ್ಲಿ ಟೊಯೋಟಾ ಕಂಪೆನಿಯವರು ತಲಾ 10 ಕೋಟಿ ವೆಚ್ಚದಲ್ಲಿ 7 ಕೆಪಿಎಸ್ ಶಾಲೆ ನಿರ್ಮಾಣ ಮಾಡುತ್ತಿದ್ದಾರೆ.
ಉತ್ತಮ ಶಿಕ್ಷಣ ಆಯಾಯ ಊರಿನಲ್ಲಿಯೇ ದೊರೆಯಬೇಕು. ಇಲ್ಲದಿದ್ದರೆ ವಲಸೆ ತಡೆಯಲು ಆಗುವುದಿಲ್ಲ. ನನ್ನನ್ನು ಶಿಕ್ಷಣಕ್ಕಾಗಿ ಬೆಂಗಳೂರಿಗೆ ನಮ್ಮ ತಂದೆ ತಾಯಿ ಕಳಿಸಿದರು. ನಾನು ಮರಳಿ ಊರಿಗೆ ಹೋಗಲೇ ಇಲ್ಲ. ಅದಕ್ಕೆ ಗ್ರಾಮೀಣ ಭಾಗದಲ್ಲಿ ಮೂರು ಪಂಚಾಯಿತಿಗಳು ಸೇರಿದಂತೆ ಒಂದು ಕೆಪಿಎಸ್ ಶಾಲೆ ನಿರ್ಮಾಣ ಮಾಡಲಾಗುತ್ತದೆ. ನಾನು ನಮ್ಮ ಊರಿನಲ್ಲಿ ಮೂರು ಶಾಲೆಗಳನ್ನು ದತ್ತು ತೆಗೆದುಕೋ ಎಂದು ಮಗಳಿಗೆ ಸೂಚನೆ ನೀಡಿದ್ದೇನೆ.
ರಾಜೀವ್ ಗಾಂಧಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು ದೇಶದ ಶೈಕ್ಷಣಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದರು. 'ಆಪರೇಷನ್ ಬ್ಲಾಕ್' ಬೋರ್ಡ್ ಅಭಿಯಾನದ ಮೂಲಕ ಶಿಕ್ಷಣ ಕ್ರಾಂತಿ ಮಾಡಿದರು. ಅನೇಕ ರಾಜ್ಯಗಳು ಶೇ.30 ರಷ್ಟು ಹಣವನ್ನು ಶಿಕ್ಷಣಕ್ಕೆ ವೆಚ್ಚ ಮಾಡುತ್ತಿವೆ ಎಂದು ತಿಳಿಸಿದರು.
ʼನಾನು ರಾಜಕಾರಣಿ ಇರಬಹುದು, ಜತೆಗೆ ಶಿಕ್ಷಣ ಪ್ರೇಮಿ. ನಾನು ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ. ಶಾಲೆಗಳಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ವಿದ್ಯಾರ್ಥಿ ನಾಯಕನಾಗಿದ್ದ ನಾನು, ಚಿಕ್ಕವಯಸ್ಸಿನಲ್ಲಿಯೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದೆ. ಅಂದಿನ ಮಹಾನ್ ನಾಯಕರಾಗಿದ್ದ ಶ್ರೀ ಎಸ್ ಬಂಗಾರಪ್ಪ, ಶ್ರೀ ವೀರಪ್ಪ ಮೊಯ್ಲಿ, ಶ್ರೀ ರಾಮಕೃಷ್ಣ ಹೆಗಡೆ ಸೇರಿದಂತೆ ಇನ್ನಿತರ ನಾಯಕರು ಅಸೆಂಬ್ಲಿಯಲ್ಲಿ ವಿಷಯಾಧಾರಿತ ಚರ್ಚೆ ನಡೆಸಿದಾಗ ನಾನು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂಬ ಭಾವನೆ ಮೂಡಿತು. ಸಚಿವನಾದ ಬಳಿಕ ಪದವಿ ಪಡೆದೆ. ಮಂತ್ರಿ ಆದ ಸಂತೋಷಕ್ಕಿಂತ ಹೆಚ್ಚು ಸಂತಸ ನಾನು ಪದವಿ ಪಡೆದಾಗ ಆಯ್ತು.
ಈ ದೇಶಕ್ಕೆ ಕೃಷಿಕ, ಶ್ರಮಿಕ, ಸೈನಿಕ, ಶಿಕ್ಷಕ ಸಮಾಜದ ಆಧಾರ ಸ್ತಂಭಗಳು. ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಕಾಲದಲ್ಲಿ ಕಷ್ಟಪಟ್ಟು ಓದಿಸಿ ಬರೆಸುತ್ತಿದ್ದರು. ನಂತರ ಕ್ಯಾಲ್ಕುಲೇಟರ್, ಕಂಪ್ಯೂಟರ್ ಆವಿಷ್ಕಾರವಾಯಿತು. ಈಗ ಮೊಬೈಲ್ ಬಂದ ಪರಿಣಾಮ ಮಕ್ಕಳೇ ಶಿಕ್ಷಕರ ತಪ್ಪು ಹುಡುಕುವಂತಾಗಿದೆ. ಈಗ ಕಾಲ ಕೃತಕ ಬುದ್ದಿಮತ್ತೆ ಕಡೆ ಸಾಗುತ್ತಿದ್ದು ಮತ್ತೊಂದು ಹಂತ ತಲುಪಿದೆ. ಮೊಬೈಲ್ ಫೋನ್ ಬಂದ ಮೇಲೆ ಉಪಯೋಗ ಎಷ್ಟಿದೇಯೋ ಕೆಟ್ಟ ಪರಿಣಾಮಗಳು ಅಷ್ಟೇ ಇವೆ. ಉತ್ತರ ಭಾರತಕ್ಕೆ ಹೋಲಿಸಿಕೊಂಡರೆ ನಮ್ಮಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ. ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 23 ಲಕ್ಷ ಇದ್ದಾರೆ. ಟಾಟಾ ಸಂಸ್ಥೆ, ಎಚ್ ಎಂಟಿ, ಬಿಇಎಲ್, ಬಿಇಎಂಎಲ್, ಇಸ್ರೋ ಹೀಗೆ ಅನೇಕ ಬೌದ್ದಿಕ ಸಂಸ್ಥೆಗಳು ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು ನಮ್ಮ ಹೆಗ್ಗಳಿಕೆ ಎಂದರು.
ಶಿಕ್ಷಣ ಕ್ಷೇತ್ರದ ಪರಿಷತ್ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಈ ತಿಂಗಳ ಒಳಗಾಗಿ ಅರ್ಜಿ ಕರೆಯಲಾಗುವುದು. ನಂತರ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಜಿ.ಸಿ. ಚಂದ್ರಶೇಖರ್ ಅವರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇತ್ತೀಚೆಗೆ ಪುಟ್ಟಣ್ಣ ಸೇರಿದಂತೆ ಅನೇಕರು ಗೆದ್ದಿದ್ದಾರೆ. ಶಿಕ್ಷಕರು ಹೊಸ ವಿಚಾರಗಳತ್ತ ಗಮನಹರಿಸಬೇಕು. ಎಐ ಈಗ ಎಲ್ಲವನ್ನು ನಿಯಂತ್ರಿಸುತ್ತಿದೆ. ಅದಕ್ಕೆ ತಕ್ಕಂತೆ ನೀವು ತಯಾರಿ ಮಾಡಿಕೊಳ್ಳಬೇಕು. ಸಮಾಜಕ್ಕೆ ನಾಲ್ಕು ಉತ್ತಮ ಪ್ರಜೆಗಳನ್ನು ತಯಾರು ಮಾಡಿದ ಆತ್ಮತೃಪ್ತಿ ನಿಮ್ಮಲ್ಲಿ ಇರಲಿ. ಗುರು ಗುರಿ ನೀಡುತ್ತಾನೆ. ಗುರಿ ತಲುಪಬೇಕಾದರೆ ಗುರು ಇರಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು. ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ನಾವು ಕಾನೂನು ಚೌಕಟ್ಟಿನೊಳಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅದೇ ಸಮಯದಲ್ಲಿ, ನಾವು ಮಾನವೀಯ ಅಂಶವನ್ನೂ ಪರಿಗಣಿಸಬೇಕು ಎಂದು ಒತ್ತಿ ಹೇಳಿದರು.
ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಸರಕಾರಿ ಶಾಲೆಯಲ್ಲಿ 10ನೆ ತರಗತಿ ಮತ್ತು ಪಿಯುಸಿಯಲ್ಲಿ ವ್ಯಾಸಂಗ ಮಾಡಿರುವ ಸುಮಾರು 36 ಸಾವಿರ ಹೆಣ್ಣುಮಕ್ಕಳಿಗೆ ಯಾವುದೇ ಐಟಿಐ ಅಥವಾ ಪದವಿ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಪ್ರತಿ ವರ್ಷ ಸುಮಾರು 30 ಸಾವಿರ ರೂಪಾಯಿ ಸ್ಕಾಲರ್ ಶಿಪ್ ನೀಡುವ ಹೊಸ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
Advertisement