
ತುಮಕೂರು: ಧರ್ಮಸ್ಥಳ ಪ್ರಕರಣ ರಾಜ್ಯ ರಾಜಕೀಯದಲ್ಲಿ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದು, ಬಿಜೆಪಿ-ಜೆಡಿಎಸ್ ಬಳಿಕ ಇದೀಗ ಕಾಂಗ್ರೆಸ್ ಕೂಡ ಧರ್ಮಸ್ಥಳ ಚಲೋ ಆರಂಭಿಸಿದೆ.
ಧರ್ಮಸ್ಥಳ, ಹಿಂದೂ ಧರ್ಮ ಬಿಜೆಪಿ ಆಸ್ತಿಯಲ್ಲ ಎಂದು ಹೇಳಿರುವ ಕುಣಿಗಲ್ ಕಾಂಗ್ರೇಸ್ ಶಾಸಕ ಡಾ ರಂಗನಾಥ್ ಅವರು ಧರ್ಮಸ್ಥಳ ಚಲೋ ಆರಂಭಿಸಿದ್ದಾರೆ.
ಇದರಂತೆ ಶನಿವಾರ ಮಹಿಳೆಯರು, ಬೆಂಬಲಿಗರು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು 340 ವಾಹನಗಳಲ್ಲಿ ಕುಣಿಗಲ್ ನಿಂದ ಧರ್ಮಸ್ಥಳಕ್ಕೆ ಹೊರಟರು. ಇಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಿದ್ದು, ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಸಾಧ್ಯತೆಯಿದೆ.
ಧರ್ಮಸ್ಥಳ ಘಟನೆ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಚಸ್ಸು ಕಡಿಮೆಯಾಗುತ್ತಿದ್ದು, ಮರಳಿ ಜನರ ವಿಶ್ವಾಸ ಗಳಿಸಲು, ಬಿಜೆಪಿ ಹಾಗೂ ಜೆಡಿಎಸ್'ಗೆ ತಿರುಗೇಟು ನೀಡಲು ಈ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳ ಚಲೋ ಆರಂಭಿಸಿರುವ ಕಾಂಗ್ರೇಸ್ ಶಾಸಕ ಡಾ ರಂಗನಾಥ್ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಹಿಂದೂ ಧರ್ಮ, ಹಿಂದೂ ದೇವಾಲಯಗಳು ಬಿಜೆಪಿಯ ಆಸ್ತಿಯಲ್ಲ. ಶ್ರೀ ಮಂಜುನಾಥೇಶ್ವರನ ಆಶೀರ್ವಾದ ಪಡೆಯಲು ಭಕ್ತನಾಗಿ ನಾನು ಈ ಯಾತ್ರೆ ಕೈಗೊಳ್ಳುತ್ತಿದ್ದೇನೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದಂತೆ ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಯುತ್ತಿದೆ. ಎಸ್‌ಐಟಿ ತನಿಖೆಯ ನಂತರ ಸತ್ಯ ಹೊರಬರುತ್ತದೆ. ಅಧಿಕಾರದಲ್ಲಿದ್ದಾಗ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಟ್ಟಿದ್ದ ಬಿಜೆಪಿ. ಈಗ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂದು ಹೇಳುತ್ತಿದೆ ಎಂದು ಕಿಡಿಕಾರಿದರು.
Advertisement