
ಮೈಸೂರು: ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ 'ಚಾಮುಂಡಿ ಬೆಟ್ಟ ಚಲೋ' ಮೆರವಣಿಗೆ ವೇಳೆ ದೊಡ್ಡ ಹೈಡ್ರಾಮಾ ನಡೆದಿದ್ದು, ಮಹಿಳೆಯೊಬ್ಬರು ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.
ಮಂಗಳವಾರ ಚಾಮುಂಡಿ ಬೆಟ್ಟದ ರಸ್ತೆಯ ಕುರುಬರಹಳ್ಳಿ ವೃತ್ತದಲ್ಲಿ 'ಚಾಮುಂಡಿ ಬೆಟ್ಟದ ಚಲೋ' ಮೆರವಣಿಗೆ ನಡೆಸಲು ಯತ್ನಿಸಲಾಯಿತು. ಈ ವೇಳೆ ಬಿಜೆಪಿ ನಾಯಕರು ಮತ್ತು ಹಿಂದೂ ಜಾಗರಣ ವೇದಿಕೆ ಸದಸ್ಯರು ಸೇರಿದಂತೆ ಇತರರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದರು.
ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪ್ರತಿಭಟನೆ ಮಾಡಲು ಪ್ರಯತ್ನಿಸಿದಾಗ ಅವರನ್ನು ಪೊಲೀಸರು ತಡೆದರು. ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಉಲ್ಲೇಖಿಸಿ ಈಗಾಗಲೇ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದರು.
ದರ್ಶನಕ್ಕೆ ಬಂದಿದ್ದ ಮಹಿಳೆಯನ್ನೂ ವಶಕ್ಕೆ ಪಡೆಯಲೆತ್ನಿಸಿದ ಪೊಲೀಸರು!
ಇದೇ ವೇಳೆ ಮಹಿಳೆಯೊಬ್ಬರು ಚಾಮುಂಡಿ ತಾಯಿಯ ದರ್ಶನಕ್ಕೆ ಬಂದಿದ್ದರು. ಅವರನ್ನೂ ಪ್ರತಿಭಟನಾಕಾರರು ಎಂದು ಭಾವಿಸಿದ ಮಹಿಳಾ ಪೊಲೀಸರು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಆಕೆಯನ್ನು ಎಲ್ಲಿಗೆ ಹೋಗುತ್ತಿದ್ದಾರಾ ಎಂದು ಪ್ರಶ್ನಿಸಿದ್ದು ಈ ವೇಳೆ ಆಕೆ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ಎಂದರು. ಆಗ ಅದಕ್ಕೆಲ್ಲಾ ಪರ್ಮಿಷನ್ ಇಲ್ಲ ಎಂದ ಮಹಿಳಾ ಸಿಬ್ಬಂದಿ ಆಕೆಯನ್ನೂ ವಾಹನ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ತಾನು ತನ್ನ ಪತಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದು, ದೇವರ ದರ್ಶನ ಪಡೆಯಲೂ ಕೂಡ ಅನುಮತಿ ಪಡೆಯಬೇಕೇ? ಎಂದು ಪ್ರಶ್ನಿಸಿದ್ದಾರೆ.
'ನನ್ನ ಮಗಳಿಗೆ ಇಂದು ಇಂಟರ್ ವ್ಯೂ ಇದೆ. ಚಾಮುಂಡೇಶ್ವರಿ ತಾಯಿ ಬೇಡಲು ಹೋಗುತ್ತಿದ್ದೇನೆ. ನಮ್ಮನ್ನು ತಡೆದು ಎಳೆದು ಹಾಕುತ್ತಿದ್ದೀರಾ. ಇದು ನ್ಯಾಯವಲ್ಲ' ಅಂತ ಪೊಲೀಸರ ನಡೆ ಖಂಡಿಸಿ ಮಹಿಳೆ ಕಣ್ಣೀರು ಹಾಕಿದ್ದಾರೆ.
ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಆಕೆಯನ್ನು ಬಲವಂತವಾಗಿ ವಾಹನ ಹತ್ತಿಸಲು ಯತ್ನಿಸಿದಾಗ ಮಹಿಳೆ ಕಣ್ಣೀರು ಹಾಕುತ್ತಾ ನಾನು ಪ್ರತಿಭಟನೆ ಮಾಡಲು ಬಂದಿಲ್ಲ.. ದೇವಸ್ಥಾನಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಆಗ ಅಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನು ಬಿಡುವಂತೆ ಮನವಿ ಮಾಡಿದಾಗ ಹಿರಿಯ ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದ ಹಿಂದೂ ನಾಯಕರನ್ನು ತಡೆದು ಸಿಎಆರ್ ಹಾಗೂ ಆಲನಹಳ್ಳಿ ಠಾಣೆಗೆ ಕರೆದೊಯ್ದರು. ಅಲನಹಳ್ಳಿ ಠಾಣೆಯ ಮುಂಭಾಗ ಹಿಂದೂ ಕಾರ್ಯಕರ್ತರು ಭಜನೆ ಹಾಡಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದು, 300ಕ್ಕೂ ಹೆಚ್ಚು ಪೊಲೀಸರನ್ನ (Police) ನಿಯೋಜನೆ ಮಾಡಲಾಗಿತ್ತು.
ಸೆಪ್ಟೆಂಬರ್ 22 ರಂದು ಚಾಮುಂಡಿ ಬೆಟ್ಟದ ಮೇಲೆ ನಡೆಯುವ ಈ ವರ್ಷದ ವಿಶ್ವಪ್ರಸಿದ್ಧ 'ಮೈಸೂರು ದಸರಾ - 2025' ಆಚರಣೆಯನ್ನು ಉದ್ಘಾಟಿಸಲು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಸರ್ಕಾರ ಆಹ್ವಾನ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಎಂ ಶಿವಕುಮಾರ್, ಮೈಸೂರಿನ ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯು 'ಚಾಮುಂಡಿ ಬೆಟ್ಟ ಚಲೋ' ಮೆರವಣಿಗೆಗೆ ಕರೆ ನೀಡಿತ್ತು.
Advertisement