
ಬೀದರ್: ಜಿಲ್ಲೆಯಲ್ಲಿ ಯಾವುದೇ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು, ಸರ್ಕಾರಿ ನೌಕರರ ಕಾರ್ಯ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲು ನಿರ್ಲಕ್ಷ್ಯ ತೋರಿದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 199(C) ರಂತೆ ಕಡ್ಡಾಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಾಲ್ಯವಿವಾಹವು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಅನಿಷ್ಠ ಪದ್ಧತಿಯಾಗಿದೆ. ಈ ಶತಮಾನದಲ್ಲಿಯೂ ಮುಂದುವರೆದಿರುವುದು ಶೋಚನಿಯ. ಬಾಲ್ಯ ವಿವಾಹವೆಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದ ಒಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ.
ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಧಕ್ಕೆ ಉಂಟು ಮಾಡುತ್ತದೆ. ಈ ಅಪಾಯಕಾರಿ ಪದ್ಧತಿಯು ತಾಯಂದಿರ ಮರಣ, ಶಿಶು ಮರಣ, ಅಪೌಷ್ಠಿಕತೆ ಉಂಟು ಮಾಡುವುದಲ್ಲದೇ ಮಕ್ಕಳ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಬಾಲ್ಯ ವಿವಾಹ ತಡೆಗಟ್ಟುವ ಕಾರ್ಯವು ಕೇವಲ ಸರ್ಕಾರಿ ಅಧಿಕಾರಿಗಳ ಜವಾಬ್ದಾರಿಯಾಗಿರದೇ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2016ರ ಪ್ರಕಾರ ಒಂದು ವೇಳೆ ಬಾಲ್ಯವಿವಾಹ ನಡೆದಲ್ಲಿ 18 ವರ್ಷದೊಳಗಿನ ಹೆಣ್ಣು ಮಗುವನ್ನು ಮದುವೆಯಾದ ವಯಸ್ಕ ವ್ಯಕ್ತಿ, ಮದುವೆ ಮಾಡುವ ಪಾಲಕ ಪೋಷಕರು, ಇಂತಹ ಮದುವೆಯಲ್ಲಿ ಭಾಗವಹಿಸುವವರು, ಬಾಲ್ಯವಿವಾಹ ಏರ್ಪಡಿಸುವ, ನಿರ್ದೇಶಿಸುವ, ನೆರವೇರಿಸುವ ಮತ್ತು ಮದುವೆಗೆ ಕುಮ್ಮಕ್ಕು ನೀಡುವ ಸಂಸ್ಥೆ, ವ್ಯಕ್ತಿ, ಕಾಯ್ದೆಯಡಿ ನೀಡಿದ ತಡೆಯಾಜ್ಞೆ ಉಲ್ಲಂಘಿಸಿದವರು, ಮಗುವಿನ ಜವಾಬ್ದಾರಿ ಹೊತ್ತ ವ್ಯಕ್ತಿ, ಸಂಸ್ಥೆಯ ನಿರ್ಲಕ್ಷ್ಯತೆಯಿಂದ ಬಾಲ್ಯವಿವಾಹವನ್ನು ತಡೆಯಲು ವಿಫಲರಾದವರು ಸಹ ತಪ್ಪಿತಸ್ಥರಾಗಿರುತ್ತಾರೆ.
ಈ ಕಾಯ್ದೆ ಪ್ರಕಾರ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಅಂದರೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ. ವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ಅಥವಾ ಇವೆರಡರಿಂದಲೂ ಶಿಕ್ಷೆಗೆ ಗುರಿಯಾಗತಕ್ಕದ್ದು, ಈ ಕಾಯ್ದೆಯಡಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡುವ ಅವಕಾಶವಿರುತ್ತದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಬಾಲ್ಯ ವಿವಾಹ ತಡೆಗಾಗಿ ರಾಜ್ಯ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿಯ ಪ್ರಕ್ರಿಯೆಗಳ 12 ನೇ ಅಂಶದಲ್ಲಿ, ಸುಪ್ರೀಂ ಕೋರ್ಟ್‌ನ ರಿಟ್ ಅರ್ಜಿಗೆ ಅನುಸಾರವಾಗಿ, ಯಾವುದೇ ಸಾರ್ವಜನಿಕ ಸೇವಕ (ಸರ್ಕಾರಿ ಉದ್ಯೋಗಿ) ತಮ್ಮ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ನಿರ್ಲಕ್ಷಿಸಿದರೆ, ಭಾರತೀಯ ದಂಡ ಸಂಹಿತೆ (BNS) 2023 ರ ಸೆಕ್ಷನ್ 199(C) ರ ನಿಬಂಧನೆಗಳ ಅಡಿಯಲ್ಲಿ ಕಡ್ಡಾಯ ಕ್ರಮ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
Advertisement