
ಚಿಕ್ಕಮಗಳೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆಯನ್ನು ರಾಜ್ಯ ಸರ್ಕಾರ ಮತ್ತು ಮಂಡ್ಯ ಜಿಲ್ಲಾಡಳಿತ ಮಂಡಳಿ ತೀವ್ರವಾಗಿ ಖಂಡಿಸಿದ್ದು, ಹಿಂಸಾಚಾರಕ್ಕೆ ಕಾರಣರಾದ ಚನ್ನಪಟ್ಟಣದ ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿಯವರು, ಪ್ರಕರಣದಲ್ಲಿ ಯಾವುದೇ ಹಿಂದೂಗಳನ್ನು ಬಂಧಿಸಲಾಗಿಲ್ಲ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಮೂರು ದಿನಗಳಿಂದ ಎಡಿಜಿಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಮತ್ತು ಐಜಿ ಮತ್ತು ಎಸ್‌ಪಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮಕ್ಕಾಗಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ನಾವು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ, ಇದರ ಹೊರತಾಗಿಯೂ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿ ಮಂಗಳವಾರ ಮದ್ದೂರಿನಲ್ಲಿ ಬಂದ್ ಆಚರಿಸಿದರು. ಇಂದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಮದ್ದೂರಿಗೆ ಭೇಟಿ ನೀಡುತ್ತಿದ್ದಾರೆ. ಸರ್ಕಾರ ಈಗಾಗಲೇ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡಿರುವಾಗ, ಪ್ರತಿಭಟನೆ ನಡೆಸುವುದು ರಾಜಕೀಯ ಪ್ರೇರಿತವಾಗಿದೆ ಎಂದು ಕಿಡಿಕಾರಿದರು.
ನನಗಿರುವ ಮಾಹಿತಿ ಪ್ರಕಾರ ಸಾಮೂಹಿಕ ಗಣಪತಿ ಮೆರವಣಿಗೆಗೆ ನಾಲ್ಕೈದು ಗಣಪತಿಗಳು ಮಾತ್ರ ಇದ್ದವು. ಬೆಂಗಳೂರಿನಿಂದ ಖರೀದಿ ಮಾಡಿ ತಂದು ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಪ್ರಯತ್ನವನ್ನು ಬಿಜೆಪಿ–ಜೆಡಿಎಸ್‌ನವರು ಮಾಡಿದರು ಎಂದು ಆರೋಪಿಸಿದ್ದಾರೆ.
ಅವರು ಸಾಮೂಹಿಕವಾಗಿ ಗಣೇಶ ವಿಸರ್ಜನೆ ಮಾಡಲು ಯೋಜಿಸುತ್ತಿದ್ದಾರೆ, ಗ್ರಾಮಸ್ಥರಿಗೆ ಭದ್ರತೆ ಒದಗಿಸಲಾಗುವುದು ಎಂದೂ ಇದೇ ವೇಳೆ ಭರವಸೆ ನೀಡಿದರು.
Advertisement