
ಬೆಂಗಳೂರು: ಬೆಂಗಳೂರು ರಸ್ತೆಗುಂಡಿಗಳು ಮತ್ತೆ ರಾಷ್ಟ್ರೀಯ ಮಟ್ಟದ ಸುದ್ದಿಗೆ ಗ್ರಾಸವಾಗಿದ್ದು, 20 ಮಕ್ಕಳಿದ್ದ ಶಾಲಾ ಬಸ್ ರಸ್ತೆಗುಂಡಿಗೆ ಸಿಲುಕಿ ಮಗುಚಿಕೊಂಡ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರಿನ ಬಳಗೆರೆಯಲ್ಲಿ ಮಳೆಯಿಂದಾಗಿ ರಸ್ತೆ ಗುಂಡಿಯಲ್ಲಿ ಕೆಸರು ತುಂಬಿದ್ದ ಪರಿಣಾಮ ಶಾಲಾ ಬಸ್ ಗುಂಡಿಗೆ ವಾಲಿಕೊಂಡ ಘಟನೆ ನಡೆದಿದೆ.
ಈ ಬಸ್ ನಲ್ಲಿ ಸುಮಾರು 20 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಬಳಗೆರೆ ರಸ್ತೆಯಲ್ಲಿ ಬೃಹತ್ ಗುಂಡಿಗೆ ಬಸ್‌ವೊಂದು ಉರುಳಿತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಗಿದ್ದೇನು?
ಪಣತ್ತೂರು ಮುಖ್ಯ ರಸ್ತೆಯ 20 ಮಕ್ಕಳಿದ್ದ ಖಾಸಗಿ ಶಾಲಾ ಬಸ್ಸೊಂದು ಸಾಗುತ್ತಿತ್ತು. ಆದರೆ, ರಸ್ತೆ ಮಧ್ಯೆ ನಿರ್ಮಾಣವಾಗಿದ್ದ ಬೃಹತ್ ಗುಂಡಿ ಮಳೆ ನೀರು ತುಂಬಿ ಕೆಸರುಮಯವಾಗಿತ್ತು.
ಇದೇ ವೇಳೆ ಬಸ್ಸು ಏಕಾಏಕಿ ರಸ್ತೆಗುಂಡಿಗೆ ಇಳಿದಿದ್ದು, ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಎಡಕ್ಕೆ ವಾಲಿಕೊಂಡಿದೆ. ನೋಡ ನೋಡುತ್ತಲೇ ಬಸ್ ಪಲ್ಟಿಯಾಗುವ ಸ್ಥಿತಿಗೆ ತಲುಪಿತು. ಈ ದೃಶ್ಯಾವಳಿ ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಓವರ್ ಟೇಕ್ ಮಾಡಲು ಹೋದಾಗ ಘಟನೆ
ಶಾಲಾ ಬಸ್ ಚಾಲಕ ಎಡಭಾಗದಿಂದ ಮತ್ತೊಂದು ಶಾಲಾ ಬಸ್ಸನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಸ್ ಚಾಲಕ ಎಡಭಾಗದಿಂದ ಮುನ್ನಗ್ಗಲು ಮುಂದಾದಾಗ ಬಸ್ಸಿನ ಚಕ್ರಗಳು ಕೆಸರಿನಲ್ಲಿ ಸಿಲುಕಿಕೊಂಡವು. ಕೂಡಲೇ ಬಸ್ ವಾಲಿಕೊಂಡು ನಿಂತಿತು. ಇದರಿಂದ ಬಸ್ ನಲ್ಲಿದ್ದ ಮಕ್ಕಳು ಆಘಾತಕ್ಕೊಳಗಾಗಿ ಭಯಭೀತಗೊಂಡರು.
ಕೂಡಲೇ ಸ್ಥಳೀಯರು, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಇತರೆ ವಾಹನ ಚಾಲಕರು ನೆರವಿಗೆ ಧಾವಿಸಿದರು. ಬಸ್ ನ ಎಮರ್ಜೆನ್ಸಿ ಡೋರ್ ಅನ್ನು ತೆರೆದು ಮಕ್ಕಳನ್ನು ಹೊರಕ್ಕೆ ಕರೆತಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಮಕ್ಕಳಿಗೆ ಗಾಯಗಳಾಗಿಲ್ಲ. ಬಳಿಕ ಕ್ರೇನ್ ನೆರವಿನಿಂದ ಬಸ್ ಅನ್ನು ರಸ್ತೆ ಮೇಲೆ ತಂದು ಪುನಃ ಪ್ರಯಾಣ ಮುಂದುವರೆಸಲು ಅನುವು ಮಾಡಿಕೊಡಲಾಗಿದೆ.
ಸರ್ಕಾರಕ್ಕೆ ಹಿಡಿಶಾಪ
ರಸ್ತೆ ದುರಸ್ತಿ ಮಾಡಿಸದ ಕಾರಣ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಸರ್ಕಾರಕ್ಕೆ ನಾವು ಕಟ್ಟುವ ದುಬಾರಿ ತೆರಿಗೆ ಹಣ ಮಾತ್ರ ಬೇಕು. ನಮಗಾಗಿ ಮೂಲಸೌಕರ್ಯ ಸರಿಪಡಿಸಲು ಯಾವುದೇ ಕ್ರಮಕೈಗೊಳ್ಳಲ್ಲ ಎಂದು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ನಗರದ ರಸ್ತೆಗಳ ನಿರ್ವಹಣೆಯೇ ಮಾಡುತ್ತಿಲ್ಲ. ಇದರಿಂದ ಜನರು ಪ್ರತಿದಿನ ಅಪಾಯಕಾರಿ ಮಾರ್ಗಗಳಲ್ಲಿ ಪ್ರಯಾಣಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ರಸ್ತೆಗಳನ್ನು ಸರಿಪಡಿಸಿ, ಜನರ ಜೀವ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಂತೆಯೇ ಈ ಘಟನೆಯಲ್ಲಿ ಚಾಲಕನದ್ದೂ ತಪ್ಪಿದೆ ಎಂದು ನೆಟ್ಟಿಗರು ಕಿಡಿಕಾರಿದ್ದು, 'ಚಾಲಕ ರಸ್ತೆ ಓವರ್‌ಟೇಕ್ ಮಾಡಲು ಹೋಗಿ ಹೀಗಾಗಿದೆ, ಇದು ಚಾಲಕನದ್ದೇ ತಪ್ಪು ಎಂದಿದ್ದಾರೆ.
Advertisement