
ಬೆಂಗಳೂರು: ರಾಜ್ಯದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವಲ್ಲಿ ಅರಣ್ಯ ಇಲಾಖೆಯ ಗಂಭೀರತೆ ಮತ್ತು ಪ್ರಯತ್ನಗಳ ಕೊರತೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯಿಂದ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ "ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳು, ವನ್ಯಜೀವಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಅದರಿಂದ ಮಾನವ-ವನ್ಯಜೀವಿ ಸಂಘರ್ಷದಲ್ಲೂ ಏರಿಕೆಯಾಗುವಂತಾಗಿದೆ. ಅದನ್ನು ತಡೆಯಲು ಅಗತ್ಯವಿರುವ ಕ್ರಮ ಕೈಗೊಳ್ಳಬೇಕು ಹಾಗೂ ಅಧಿಕಾರಿಗಳು ಕಚೇರಿಯಲ್ಲಿ ಕೂರದೆ ಕಾಡಿಗೆ ಭೇಟಿ ನೀಡಿ ವನ್ಯಜೀವಿ, ಅರಣ್ಯ ಸಂರಕ್ಷಣೆಯತ್ತ ಗಮನಹರಿಸಬೇಕು ಸೂಚಿಸಿದರು.
ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಕೂತು ಕರ್ತವ್ಯ ನಿರ್ವಹಿಸುವ ಬದಲು, ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದರೆ ಕಾಡ್ಗಿಚ್ಚು, ಅರಣ್ಯ ನಾಶ, ವನ್ಯಜೀವಿಗಳ ಬೇಟೆಯಂಥ ದುಷ್ಕೃತ್ಯಕ್ಕೆ ಕಡಿವಾಣ ಹಾಕಬಹುದು. ಅದು ಹಿರಿಯ ಅಧಿಕಾರಿಗಳ ಜವಾಬ್ದಾರಿ. ಅದನ್ನು ಪಾಲಿಸಬೇಕು ಎಂದು ಹೇಳಿದರು.
ಅರಣ್ಯ ಇಲಾಖೆ ಪ್ರತಿವರ್ಷ ಲಕ್ಷಾಂತರ ಗಿಡ ನೆಟ್ಟು, ಕೋಟ್ಯಂತರ ರು. ವೆಚ್ಚ ಮಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ 11 ಕೋಟಿ ಸಸಿಗಳನ್ನು ವಿತರಿಸಿ, ನೆಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಅವುಗಳಲ್ಲಿ ಎಷ್ಟು ಗಿಡಗಳು ಎಷ್ಟು ಬೆಳೆದಿವೆ, ಎಷ್ಟು ನಾಶವಾಗಿವೆ ಎಂಬುದರ ಲೆಕ್ಕ ಅರಣ್ಯ ಇಲಾಖೆಯಲ್ಲಿಲ್ಲ. ಗಿಡಗಳನ್ನು ನೆಟ್ಟಿರುವುದನ್ನು ನೋಡಿದರೆ, ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಬೇಕಿತ್ತು. ಆದರೆ, ನಿರೀಕ್ಷಿತಮಟ್ಟದಲ್ಲಿ ಹೆಚ್ಚಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾನವರ ಅಳಿವು - ಉಳಿವು ಅರಣ್ಯದ ಉಳಿವಿನ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅರಣ್ಯ ರಕ್ಷಣೆಯ ಕಾರ್ಯದಲ್ಲಿ ಹುತಾತ್ಮರಾದವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಹಸಿರಿನ ಹೊದಿಕೆ ಹೆಚ್ಚಾದರೆ ಅರಣ್ಯವೂ ಹೆಚ್ಚುತ್ತದೆ. ಅರಣ್ಯ ಸಂಪತ್ತೂ ಹೆಚ್ಚುತ್ತದೆ. ಕಾಡು ಪ್ರಾಣಿ ಸಂಪತ್ತಿನಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಕಾಡು ಪ್ರಾಣಿಗಳಿಗೆ ಅಗತ್ಯವಾದ ಆಹಾರ, ನೀರು ಕಾಡಿನಲ್ಲೇ ಸಾಕಷ್ಟು ಸಿಗುವಂತೆ ಮಾಡಿದರೆ ವನ್ಯಜೀವಿ - ಮಾನವ ಸಂಘರ್ಷವನ್ನು ತಡೆಗಟ್ಟಬಹುದು.
ಕಾಡು ಪ್ರಾಣಿಗಳ ಮತ್ತು ಮಾನವರ ಸಂಘರ್ಷ ತಪ್ಪಿಸಲು ರೈಲ್ವೇ ಬ್ಯಾರಿಕೇಡ್ ಗಳನ್ನು ನಿರ್ಮಿಸಲು ಮತ್ತು ಇವುಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಅರಣ್ಯ ಇಲಾಖೆ ಬಡ ಇಲಾಖೆಯಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹಣವಿದೆ. ದುಡ್ಡು ಇಟ್ಟುಕೊಂಡರೆ ಮರಿ ಹಾಕುವುದಿಲ್ಲ. ಇರುವ ಹಣವನ್ನು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿ ಮತ್ತಿತರ ಕೆಲಸಗಳಿಗೆ ಬಳಕೆ ಮಾಡಿ, ಅಗತ್ಯಬಿದ್ದರೆ ಸರ್ಕಾರ ಕೂಡ ಹಣ ಕೊಡಲು ಸಿದ್ಧವಿದೆ. ಹಿರಿಯ ಅಧಿಕಾರಿಗಳು ಆಗಿಂದ್ದಾಗೆ ಕಾಡಿಗೆ ಭೇಟಿ ನೀಡಿ, ಹೆಚ್ಚೆಚ್ಚು ಕಾಡಿನಲ್ಲೇ ಉಳಿಯಬೇಕು. ಆಗ ಮಾತ್ರ ಕೆಳ ಹಂತದ ಸಿಬ್ಬಂದಿ ಕೂಡ ಕಾಡೊಳಗೆ ಇದ್ದು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆಂದು ತಿಳಿದರು.
Advertisement