
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯಾಚರಣೆ ನಡೆಸುವ ಕುರಿತು ಕಾನೂನು ಅಭಿಪ್ರಾಯ ಪಡೆಯಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸ್ಥಳ ಮಹಜರು ಕುರಿತು ಕಾನೂನು ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಎಸ್‌ಐಟಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಗ್ಲೆಗುಡ್ಡೆಯಲ್ಲಿ ರಾಶಿ ರಾಶಿ ಮೂಳೆಗಳು, ಮೂರ್ನಾಲ್ಕು ತಲೆಬುರುಡೆಯನ್ನು ಸ್ಥಳ ಮಹಜರು ವೇಳೆ ನೋಡಿದ್ದೆ ಎಂದು ವಿಡಿಯೋ ಮಾಡಿ ವಿಠಲಗೌಡ ಹರಿಬಿಟ್ಟಿದ್ದರು. ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲೇ ನೋಡಿದ್ದಾಗಿಯೂ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡೆಗೆ ಸ್ಥಳ ಮಹಜರು ನಡೆಸಲು ಎಸ್ಐಟಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದು, ಇದಕ್ಕಾಗಿ ಕಾನೂನು ಅಭಿಪ್ರಾಯ ಪಡೆಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ವಿಠಲಗೌಡ ಹೇಳಿದಂತೆ ಸ್ಥಳದಲ್ಲಿ ಅಷ್ಟೊಂದು ಮಾನವ ಅಸ್ತಿಪಂಜರಗಳು ಕಂಡು ಬಂದಿದ್ದೇ ಆದರೆ, ಅಷ್ಟೊಂದು ಮಾನವ ಅಸ್ತಿ ಪಂಜರಗಳು ಅಲ್ಲೇಕೆ ಬಂದವು ಎಂಬುದರ ಕುರಿತು ತನಿಖೆ ನಡೆಸಬೇಕಿದೆ. ವಿಠಲಗೌಡ ತಲೆಬುರುಡೆಯನ್ನು ತೆಗೆದ ಸ್ಥಳವನ್ನು ಈಗಾಗಲೇ ತೋರಿಸಿದ್ದಾರೆ. ಹೀಗಾಗಿ ಆತನಿಲ್ಲದೆ ನಾವು ಸ್ಥಳ ಮಹಜರು ನಡೆಸಬಹುದಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಬಂಗ್ಲೆಗುಡ್ಡೆ ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಸಹಾಯಕ್ಕಾಗಿ ಅರಣ್ಯ ಇಲಾಖೆಗೆ ತಿಳಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement