
ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದಿಂದ ತೊಂದರೆಗೊಳಗಾಗುವ ಜನರ ಪುನರ್ವಸತಿ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್'ನ ಲೋಗೋ ಬಿಡುಗಡೆ ಮಾಡುವ ಸಂದರ್ಭದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಉತ್ತರ ಕರ್ನಾಟಕ ಪ್ರದೇಶದ ನೀರಾವರಿ ಯೋಜನೆಗಳಿಗೆ ಸರ್ಕಾರದ ಬದ್ಧತೆಯ ಕುರಿತು ಎತ್ತಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಮಹದಾಯಿ ಯೋಜನೆಯನ್ನು ಕಾರ್ಯಗತಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 519 ಮೀಟರ್‌ಗಳಿಂದ 524 ಮೀಟರ್‌ಗಳಿಗೆ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ ನಂತರ, ರಾಜ್ಯ ಸರ್ಕಾರವು ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಿರುವ 1.33 ಲಕ್ಷ ಎಕರೆ ಭೂಮಿಯಲ್ಲಿ ಸುಮಾರು 29,000 ಎಕರೆ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ ಒಂದು ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ಮುಂಬರುವ ದಿನಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಆದರೆ, ನಿರಾಶ್ರಿತ ಕುಟುಂಬಗಳು ಶೇ 80ರಷ್ಟು ನೀರಾವರಿ ಭೂಮಿಗೆ ಎಕರೆಗೆ 40 ಲಕ್ಷ ರೂ., ಒಣ ಭೂಮಿಗೆ ಎಕರೆಗೆ 30 ಲಕ್ಷ ರೂ. ಪರಿಹಾರ ನೀಡುವಂತೆ ಕೋರುತ್ತಿದ್ದಾರೆ. ಮಂಗಳವಾರ ಕರೆಯಲಾಗುವ ಸಚಿವ ಸಂಪುಟ ಸಭೆಯಲ್ಲಿ ಭೂಮಿಯ ಬೆಲೆ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದರು.
‘ಊಹಾತ್ಮಕ ಪತ್ರಿಕೋದ್ಯಮ ನಿಲ್ಲಿಸಿ’
ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು "ಊಹಾತ್ಮಕ ಪತ್ರಿಕೋದ್ಯಮ" ನಿಲ್ಲಿಸುವಂತೆ ಪತ್ರಕರ್ತರಿಗೆ ಕರೆ ನೀಡಿದರು.
ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ? ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ ಎಂದು ಹೇಳಿದರು.
ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ದೊಡ್ಡ ವಿಷಯದಂತೆ ಮಾಧ್ಯಮಗಳಲ್ಲಿ ಚರ್ಚೆ ನಡೆಯಿತು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ಮಾಧ್ಯಮದಲ್ಲಿ ಹೀಗೆಲ್ಲಾ ತೋರಿಸಿದರೆ ಜನ ಒಪ್ಪುತ್ತಾರಾ ಎಂದು ಯೋಚನೆ ಮಾಡಬೇಕು.
ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಲು ನಮ್ಮ ಸರ್ಕಾರ ಸದಾ ಸಿದ್ಧ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ. ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯು ಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘವು ಬೇಡಿಕೆ ಸಲ್ಲಿಸಿದೆ. ಈ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
Advertisement