
ಬಳ್ಳಾರಿ: ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹೊಸ, ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೂ ರಾಜ್ಯದಲ್ಲಿ ಹಲವಾರು ಶಾಲೆಗಳು ಶಿಥಿಲಾ ವ್ಯವಸ್ಥೆಯಲ್ಲಿವೆ. ಒಳ್ಳಾರಿಯಲ್ಲಿ ಸರ್ಕಾರಿ ಶಾಲೆಯೊಂದು ಶಿಥಿಲಾ ವ್ಯವಸ್ಥೆಯಲ್ಲಿದ್ದು, ಕಟ್ಟಡದ ಮೇಲ್ಛಾವಣಿ ಕುಸಿಯುವ ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುವಂತಹ ಸ್ಥಿತಿ ಎದುರಾಗಿದೆ.
ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳ ಗ್ರಾಮದ ಸರ್ಕಾರಿ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ಶಾಲೆಯ ಮೇಲ್ಛಾವಣಿ ಕುಸಿದು ಅಲ್ಲಲ್ಲಿ ಸಿಮೆಂಟ್ ನೆಲಕ್ಕೆ ಬಿದ್ದಿದೆ. ಕಬ್ಬಿಣದ ರಾಡುಗಳು ಮೇಲ್ಛಾವಣಿಯಿಂದ ಕೆಳಗೆ ಜೋತು ಬಿದ್ದಿವೆ. ಇಂದೋ, ನಾಳೆಯೋ ಈ ಕಟ್ಟಡ ಬೀಳುವಂತಿದೆ. ಎಲ್ಲೆಂದರಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ.
ಹೀಗಾಗಿ, ಯಾವಾಗ ಕಟ್ಟಡ ಬೀಳುತ್ತದೋ ಎಂಬ ಭಯದಲ್ಲಿಯೇ ಶಿಕ್ಷಕರು ಶಾಲಾ ಕಾಂಪೌಂಡ್‌ನಲ್ಲಿ ಮಕ್ಕಳನ್ನು ಕುಳ್ಳಿರಿಸಿ ಪಾಠ ಮಾಡುತ್ತಿದ್ದಾರೆ.
ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಸೇರಿದಂತೆ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗಿನ ವಿದ್ಯಾರ್ಥಿಗಳಿದ್ದು, ಎಲ್ಲರನ್ನೂ ಕಾಂಪೌಂಡ್‌ನಲ್ಲಿ ಕೂರಿಸಿ ಬೋಧನೆ ಮಾಡುತ್ತಿದ್ದಾರೆ.
ಶಿಕ್ಷಕರಷ್ಟೇ ಅಲ್ಲದೆ, ಮಕ್ಕಳ ಪೋಷಕರು ಕೂಡ ಕಟ್ಟಡ ದುರಸ್ಥಿ ಮಾಡುವಂತೆ ಸ್ಥಳೀಯ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಗೆ ಕಳೆದ 5 ವರ್ಷಗಳಿಂದಲೂ ಮನವಿ ಮಾಡುತ್ತಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಇದೊಂದು ಶಾಲೆಯಷ್ಟೇ ಅಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಶಾಲಾ ಕಟ್ಟಡಗಳ ಸ್ಥಿತಿ ಕೂಡ ಇದೇ ರೀತಿ ಇದ್ದು, ಈ ಕಟ್ಟಡಗಳ ಪುನನಿರ್ಮಾಣದ ಅಗತ್ಯವಿದೆ.
ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕೇವಲ ಒಂದು ತರಗತಿ ಮಾತ್ರ ಬೋಧನೆ ಮಾಡಲು ಯೋಗ್ಯವಾಗಿದೆ. ನಿರ್ಮಹಣೆಯ ಕೊರತೆಯಿಂದಾಗಿ ಕಟ್ಟಡ ಸಂಪೂರ್ಣ ಹಾನಿಗೊಳಗಾಗಿದೆ. ಟೆರೇಸ್ ಗೋಡೆಯ ಸಿಮೆಂಟ್ ತುಂಡುಗಳು ಕೆಳಗೆ ಬೀಳುತ್ತಿವೆ ಎಂದು ವಿದ್ಯಾರ್ಥಿಯೊಬ್ಬರ ಪೋಷಕರಾದ ನಾಗಪ್ಪ ವಾಲ್ಮೀಕಿ ಎಂಬುವವರು ಹೇಳಿದ್ದಾರೆ.
ಯಾವುದೇ ದುರಂತ ಸಂಭವಿಸುವ ಮೊದಲು ಸರ್ಕಾರ ಶಾಲಾ ಕಟ್ಟಡವನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement