
ಬಳ್ಳಾರಿ: ವಿಜಯನಗರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮನೆ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಅವರ ಚಿತ್ರ ಕೆತ್ತಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.
ವಿಜಯನಗರದ ಕೊಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದಲ್ಲಿ ನಡೆದ ಅಪರೂಪದ ಘಟನೆ, ಇದೀಗ ಈ ಫೋಟೋ ಸಾಕಷ್ಟು ವೈರಲ್ ಆಗಿದೆ. ಕೆಂಚಮಲ್ಲನಹಳ್ಳಿ ಗ್ರಾಮದ ದಂಪತಿ ಕೆ ಎಂ ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ಅವರು ಗೃಹಲಕ್ಷ್ಮೀ ಯೋಜನೆಯ ಮೂಲಕ ಬರುವ ಹಣವನ್ನು ಜಮಾ ಮಾಡಿ, ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ.
ಕೆ ಎಂ ತಿಪ್ಪೇಸ್ವಾಮಿ ಅವರು ಕಳೆದ ಎರಡು ವರ್ಷಗಳ ಹಿಂದೆಯೇ ಮನೆಯೊಂದನ್ನು ಕಟ್ಟಿಸಿದ್ದರು. ಆದರೆ, ಹಣಕಾಸಿನ ಸಮಸ್ಯೆಯಿಂದ ಅವರು ಬಾಗಿಲನ್ನು ಮಾಡಿಸಿರಲಿಲ್ಲ. ಇದೀಗ ಅವರು ತಮ್ಮ ಪತ್ನಿ ಪಾರ್ವತಮ್ಮ ಅವರಿಗೆ ಕಳೆದ 15 ತಿಂಗಳಿಂದ ಬಂದಿದ್ದ ಹಣದಿಂದ ಮನೆಗೆ ಮುಂಬಾಗಿಲನ್ನು ಮಾಡಿಸಿದ್ದಾರೆ.
ಕೇವಲ ಅವರು ಬಾಗಿಲನ್ನು ಮಾಡಿಸಿಲ್ಲ, ಅದರ ಮೇಲೆ ಸಿಎ ಸಿದ್ದರಾಮಯ್ಯ ಅವರ ಭಾವಚಿತ್ರನ್ನು ಕೆತ್ತಿಸಿದ್ದಾರೆ. ಮತ್ತು ಬಾಗಿಲಿನ ಮೇಲೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಎಂದು ಬರೆಸಿದ್ದಾರೆ. ಈ ಮೂಲಕ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಆರ್ಥಿಕ ಸಮಸ್ಯೆಯಿಂದ ಬಾಗಿಲು ದುರಸ್ಥಿ ಮಾಡಲು ಸಾಧ್ಯವಾಗಿರಲಿಲ್ಲ, ಇದೀಗ ಗೃಹಲಕ್ಷ್ಮೀ ಯೋಜನೆ ಅವರಿಗೆ ಕೈಹಿಡಿದ್ದು, ಈ ಹಣಕಾಸಿನಿಂದ ಅವರು ನೂತನ ಬಾಗಿಲನ್ನು ಹಾಕಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಅನ್ನಭಾಗ್ಯ, ಅವರ ಗೃಹ ಲಕ್ಷ್ಮೀ ಮುಂತಾದ ಯೋಜನೆಗಳಿಂದ ನಾವು ಉತ್ತಮ ಬದುಕು ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಮನೆಯ ಮುಂಬಾಗಿಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಹಾಕುವುದರ ಜೊತೆಗೆ, ದಂಪತಿ ಹೊಸ ಬಾಗಿಲಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣದಿಂದ ಸಾಕಷ್ಟು ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಂಡಿರೋ ನಿದರ್ಶನಗಳಿವೆ. ಈಗ ಅದೇ ರೀತಿ ಗೃಹಲಕ್ಷ್ಮಿ ಹಣದಿಂದಲೇ ಸಿಎಂಗೆ ವಿನೂತನ ರೀತಿಯಲ್ಲಿ ಈ ಬಡ ಕುಟುಂಬ ಅಭಿನಂದನೆ ಸಲ್ಲಿಸಿದೆ. ಇನ್ನೂ ಸಿದ್ದರಾಮಯ್ಯ ಭಾವಚಿತ್ರವಿರೋ ಮುಖ್ಯದ್ವಾರದ ವೀಕ್ಷಣೆಗೆ ಅಕ್ಕಪಕ್ಕದ ಗ್ರಾಮದವರು ಆಗಮಿಸುತ್ತಿದ್ದಾರೆ.
Advertisement