
ಬೆಂಗಳೂರು: ಹದಗೆಟ್ಟ, ಗುಂಡಿ ಬಿದ್ದ ರಸ್ತೆಗಳು ಐಟಿ ರಾಜಧಾನಿಯ ಚಿತ್ರಣವನ್ನು ಹಾಳು ಮಾಡಿರುವಂತೆಯೇ ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಂತಹ ನಾಗರಿಕ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆಯನ್ನು ಪ್ರತಿಬಿಂಬಿಸುತ್ತಿವೆ. ಏಕೆಂದರೆ ಈ ಏಜೆನ್ಸಿಗಳು ತಮ್ಮ ಕಾಮಗಾರಿ ಮುಗಿದ ನಂತರ ಮಹಾನಗರ ಪಾಲಿಕೆಯ ರಸ್ತೆಗಳನ್ನು ಪುನರ್ ನಿರ್ಮಿಸುತ್ತಿಲ್ಲ.
ಸಮನ್ವಯದ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸದ್ಯ ನಡೆಯುತ್ತಿರುವ ಎಲ್ಲಾ ರಸ್ತೆ ಅಗೆತ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಏಜೆನ್ಸಿಯಿಂದ ಹೊಸ ರಸ್ತೆ ಅಗೆತ ಚಟುವಟಿಕೆಗಳಿಗೆ ಅನುಮತಿ ನಿರಾಕರಿಸುವಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸೂಚನೆ ನೀಡಿದ್ದಾರೆ. "BWSSB, BESCOM ಮತ್ತು KPTCL ಸೇರಿದಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ಅನ್ವಯಿಸುತ್ತದೆ" ಎಂದು ಚೋಳನ್ ಹೇಳಿದ್ದಾರೆ.
ಗುಂಡಿಬಿದ್ದ ರಸ್ತೆಗಳು, ನೀರು ನಿಲ್ಲುವ ಸ್ಥಳಗಳು, ಬೀದಿದೀಪ ದುರಸ್ತಿ ಮತ್ತು ಪಾದಚಾರಿ ಮಾರ್ಗ ನಿರ್ವಹಣೆಯಂತಹ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪರಿಹರಿಸಲು ಪಾಲಿಕೆ ವ್ಯಾಪ್ತಿಯಲ್ಲಿನ ಪ್ರತಿ ರಸ್ತೆಗೆ ನೋಡಲ್ ಅಧಿಕಾರಿಗಳನ್ನು ಘೋಷಿಸಿದ್ದಾರೆ. ನೋಡಲ್ ಅಧಿಕಾರಿಗಳ ಪಟ್ಟಿ ಈಗಾಗಲೇ ಲಭ್ಯವಿದ್ದು, ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗುರುವಾರ ವಿವಿಧ ಪ್ರದೇಶಗಳ ಪರಿಶೀಲನೆ ವೇಳೆ ಆಯುಕ್ತರು, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ, ಕೆಪಿಟಿಸಿಎಲ್‌ನಂತಹ ಇಲಾಖೆಗಳು ತಮ್ಮ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ, ಅಗೆದ ನಂತರ ರಸ್ತೆಗಳನ್ನು ಸರಿಯಾಗಿ ಮರುಸ್ಥಾಪಿಸುವಲ್ಲಿ ವಿಫಲವಾಗಿವೆ ಎಂಬುದನ್ನು ಗಮನಿಸಿದರು. ಪರಿಣಾಮವಾಗಿ ಯಾವುದೇ ಹೊಸದಾಗಿ ರಸ್ತೆ ಅಗೆತಕ್ಕೆ ಅವಕಾಶ ನೀಡಬಾರದು. ಈ ಹಿಂದೆ ಅಗೆದ ರಸ್ತೆಗಳನ್ನು ಆಯಾ ಏಜೆನ್ಸಿಗಳು ಸಂಪೂರ್ಣವಾಗಿ ಪುನರ್ ನಿರ್ಮಿಸುವವರೆಗೂ ಪ್ರಸ್ತುತ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಸೂಚನೆಗಳನ್ನು ನೀಡಲಾಯಿತು.
ಇದರಿಂದ ನಗರದ ಪ್ರತಿಷ್ಠೆಗೆ ಧಕ್ಕೆಯಾಗುವುದಲ್ಲದೆ ವಾಹನ ಸಂಚಾರಕ್ಕೂ ಸಾಕಷ್ಟು ತೊಂದರೆಯಾಗುತ್ತಿದೆ. ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.
ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಇತರ ಏಜೆನ್ಸಿಗಳು ಅಗೆದಿರುವ ಎಲ್ಲಾ ರಸ್ತೆಗಳ ಫೋಟೋಗಳೊಂದಿಗೆ ವಿವರವಾದ, ವಾರ್ಡ್ ವಾರು ಪಟ್ಟಿಯನ್ನು ರಚಿಸಲು ಅವರು ನಿರ್ದೇಶಿಸಿದ್ದಾರೆ. ಈ ಪಟ್ಟಿಯ ನಂತರ ಸಂಬಂಧಿಸಿದ ಇಲಾಖೆಗಳೊಂದಿಗೆ ಸಭೆಗಳನ್ನು ಕರೆಯಲು ಮತ್ತು ರಸ್ತೆ ಪುನರ್ ನಿರ್ಮಾಣ ಮತ್ತು ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳನ್ನು ವಿಳಂಬವಿಲ್ಲದೆ ಕೈಗೊಳ್ಳುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.
ಸಂಪಿಗೆ ರಸ್ತೆ, ಶೇಷಾದ್ರಿ ರಸ್ತೆ, ಶಿವಾನಂದ ವೃತ್ತದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳ ಪರಿಶೀಲನೆ ನಡೆಸಿದ ಆಯುಕ್ತರು, ತ್ವರಿತಗತಿಯಲ್ಲಿ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದರು. ಪಾಲಿಕೆ ಒಡೆತನದ ಎಲ್ಲ ಆಸ್ತಿಗಳನ್ನು ಗುರುತಿಸಿ ಪಟ್ಟಿ ಮಾಡಿ ಅವುಗಳ ಸೂಕ್ತ ನಿರ್ವಹಣೆ ಮತ್ತು ರಕ್ಷಣೆಗೆ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದರು.
Advertisement