
ಬೆಂಗಳೂರು: ರಾಜ್ಯದ ಆರ್ಥಿಕತೆಗೆ ಆತಿಥ್ಯ ವಲಯ 25,000 ಕೋಟಿ ರೂ. ಕೊಡುಗೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದರು.
ನಗರದಲ್ಲಿ ಆರಂಭಗೊಂಡ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಒಕ್ಕೂಟದ 55ನೇ ಸಮಾವೇಶವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ರಾಜ್ಯದಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆ 30.46 ಕೋಟಿಗೆ ಏರಿಕೆಯಾಗಿದೆ. ಈ ಬೆಳವಣಿಗೆಯು ನಮ್ಮ ಪ್ರವಾಸಿ ತಾಣಗಳ ಸ್ಥಿತಿಸ್ಥಾಪಕತ್ವ ಮತ್ತು ಆಕರ್ಷಣೆಗೆ ಪ್ರಬಲ ಸಾಕ್ಷಿಯಾಗಿದೆ, ಪ್ರವಾಸೋದ್ಯಮ ಹಾಗೂ ಆತಿಥ್ಯ ವಲಯದಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ ಎಂಬುದನ್ನು ತೋರಿಸುತ್ತದೆ. ಪ್ರವಾಸೋದ್ಯಮ ವಲಯದ ಬೆಳವಣಿಗೆಯು 12 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಆತಿಥ್ಯ ವಲಯವೇ ಈಗ ನಮ್ಮ ಆರ್ಥಿಕತೆಗೆ ಸುಮಾರು 25,000 ಕೋಟಿ ರೂ.ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು.
ಪ್ರವಾಸಿ ಮಿತ್ರ ಯೋಜನೆಯಡಿ ಕರ್ನಾಟಕದ ಆತಿಥ್ಯ ವಲಯದಲ್ಲಿ ಒಂದು ವರ್ಷದಲ್ಲಿ 50,000 ಯುವಕರನ್ನು ಕೌಶಲಗೊಳಿಸಿ ಉದ್ಯೋಗ ನೀಡಲಾಗುವುದು. ಪ್ರವಾಸೋದ್ಯಮದ ಐದು ವರ್ಷದ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡು ಪ್ರತ್ಯೇಕ ನೀತಿಯನ್ನು ಕಳೆದ ವರ್ಷ ಜಾರಿಗೆ ತಂದಿದ್ದೇವೆ. ಎಲ್ಲರನ್ನೂ ಒಳಗೊಳ್ಳುವ, ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಆತಿಥ್ಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು ಈ ನೀತಿಯ ಉದ್ದೇಶವಾಗಿದೆ. 2029ರ ವೇಳೆಗೆ 1.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು 8,000 ಕೋಟಿ ರೂ.ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವ ಗುರಿಯಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ 54 ಹೊಸ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಿಗೆ ಸಹಾಯಧನವನ್ನು ನೀಡಲು ಅನುಮತಿ ನೀಡಲಾಗಿದೆ. ಇದಲ್ಲದೇ ಕರ್ನಾಟಕದ ಕರಾವಳಿ ಪ್ರವಾಸೋದ್ಯಮದ ಆಕರ್ಷಣೆ ಹೆಚ್ಚಿಸಲು 200 ಕೋಟಿ ರೂ. ವಿನಿಯೋಗಿಸುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಾತನಾಡಿ, ಭಾರತವನ್ನು ವಿಶ್ವದ ಅಗ್ರ ಐದು ಪ್ರವಾಸೋದ್ಯಮ ಆರ್ಥಿಕತೆಗಳಲ್ಲಿ ಇರಿಸಲು ಕೇಂದ್ರ ಸರ್ಕಾರದ ಆದ್ಯತೆಯನ್ನು ಒತ್ತಿ ಹೇಳಿದರು.
Advertisement