
ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಗಳಿಗೆ ಪೊಲೀಸರು ಶಾಕ್ ನೀಡಿದ್ದು, ರಾತ್ರೋ ರಾತ್ರಿ 1,478 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರದ 11 ಉಪ ವಿಭಾಗಗಳ ಕೆಲವು ಬಡಾವಣೆಗಳಲ್ಲಿ ನೆಲಸಿರುವ ರೌಡಿಗಳ ಮನೆಗಳ ಮೇಲೆ ಶುಕ್ರವಾರ ತಡರಾತ್ರಿ ದಿಢೀರ್ ದಾಳಿ ನಡೆಸಿದ ಪೊಲೀಸರು, ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ರೌಡಿ ಚುಟುವಟಿಕೆಗಳಲ್ಲಿ ಭಾಗಿ ಆಗಬಾರದು ಎಂದು ಸೂಚನೆ ನೀಡಿದ್ದಾರೆ.
1,478 ರೌಡಿಗಳ ಮನೆಗಳ ಮೇಲೆ ಆಯಾ ಠಾಣೆಯ ಪೊಲೀಸರು ದಾಳಿ ನಡೆಸಿದ್ದು, ಪದೇ ಪದೇ ಅಪರಾಧಗಳಲ್ಲಿ ತೊಡಗುವ ಎಂಒಬಿಗಳ (ಅಪರಾಧ ಹಿನ್ನೆಲೆಯುಳ್ಳವರು) 165 ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೂಲಗಳ ಪ್ರಕಾರ ಪೊಲೀಸರ ಈ ಕಾರ್ಯಾಚರಣೆ ವೇಳೆ 124 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಂತೆಯೇ ನ್ಯಾಯಾಲಯ ಹಾಗೂ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಕೆಲವು ರೌಡಿಗಳನ್ನು ಗಡಿಪಾರು ಮಾಡಲಾಗಿತ್ತು. ಆ ಪೈಕಿ ಮೂವರು ನಗರಕ್ಕೆ ವಾಪಸ್ ಬಂದು ನೆಲೆಸಿದ್ದು ಕಂಡುಬಂದಿದೆ. ಅವರ ಮೇಲೆ ಮತ್ತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದರು.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳತನ, ದರೋಡೆ ಸೇರಿ ಸಣ್ಣಪುಟ್ಟ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬ ದೂರು ಬಂದಿತ್ತು. ಅಪರಾಧ ಚಟುವಟಿಕೆಗಳಲ್ಲಿ ರೌಡಿಗಳು ಭಾಗಿ ಆಗುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಬಂದಿತ್ತು.
ರೌಡಿಗಳ ಚಟುವಟಿಕೆ ನಿಯಂತ್ರಿಸಲು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾ ವಹಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು. ಸೂಚನೆಯ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ನಗರದಾದ್ಯಂತ ಹಲವು ರೌಡಿಶೀಟರ್‌ಗಳ ಮನೆಗಳ ಮೇಲೆ ನಗರ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು ಎಂದು ಗೊತ್ತಾಗಿದೆ.
ಹಲಸೂರು, ಬಾಣಸವಾಡಿ, ಇಂದಿರಾನಗರ, ಹೆಣ್ಣೂರು, ರಾಮಮೂರ್ತಿನಗರ, ಭಾರತಿನಗರ, ಶಿವಾಜಿನಗರ, ಆಡುಗೋಡಿ, ಕುಮಾರಸ್ವಾಮಿ ಲೇಔಟ್, ತಿಲಕ್ ನಗರ ಸೇರಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳ ಮನೆಗಳ ಮೇಲೆ ಈ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈಶಾನ್ಯ, ಉತ್ತರ, ಪೂರ್ವ, ಪಶ್ಚಿಮ, ಎಲೆಕ್ಟ್ರಾನಿಕ್ ಸಿಟಿ, ಆಗ್ನೇಯ, ನೈರುತ್ಯ, ಕೇಂದ್ರ, ವಾಯವ್ಯ, ವೈಟ್‌ಫೀಲ್ಡ್ ಹಾಗೂ ದಕ್ಷಿಣ ಉಪ ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ನಗರದ ಎಲ್ಲಾ ವಿಭಾಗಗಳ ಉಪ ವಿಭಾಗಗಳಲ್ಲಿ ಎಸಿಪಿಗಳ ನೇತೃತ್ವದಲ್ಲಿ ಮನೆಗಳು, ಬಾರ್‌ಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದ್ದು, ಶೋಧ ನಡೆಸಲಾಗಿದೆ. ರೌಡಿಶೀಟರ್‌ಗಳ ಪ್ರಸ್ತುತ ಕೆಲಸ, ಅವರ ಆದಾಯದ ಮೂಲ ಸೇರಿ ಮತ್ತಿತರ ವಿವರಗಳನ್ನು ಕಲೆ ಹಾಕಲಾಗಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿ ಆಗದಂತೆ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿಯ ಸಂದರ್ಭದಲ್ಲಿ ಒಟ್ಟು 124 ಪ್ರಕರಣಗಳು ಹಾಗೂ ಮಾದಕ ವಸ್ತು ಬಳಕೆದಾರರ ವಿರದ್ಧ 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ, ಮೂವರು ಹೆಚ್ಚುವರಿ ಪೊಲೀಸ್ ಆಯುಕ್ತರು, 13 ಮಂದಿ ಡಿಸಿಪಿಗಳು, ನಗರದ ಎಲ್ಲಾ ವಿಭಾಗಗಳ ಎಸಿಪಿಗಳು, ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.
ಈಶಾನ್ಯ ವಿಭಾಗದಲ್ಲಿ ನಗರ ಪೊಲೀಸರು 169 ರೌಡಿಗಳ ಮನೆಗಳ ಮೇಲೆ ದಾಳಿ ನಡೆದರೆ, ಉತ್ತರ -179, ಪೂರ್ವ-247, ಪಶ್ಚಿಮ-222, ಎಲೆಕ್ಟ್ರಾನಿಕ್ ಸಿಟಿ -100, ಆಗ್ನೇಯ-120,ಕೇಂದ್ರ ವಿಭಾಗ-20, ವಾಯುವ್ಯ-102, ವೈಟ್‌ಫೀಲ್‌್ಡ-140 ರೌಡಿಗಳ ಮನೆಗಳ ಮೇಲೆ ಏಕಕಾಲದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿಬಿ ಪೊಲೀಸರು 179 ರೌಡಿಗಳ ಮನೆಗಳ ಮೇಲೆ ಹಾಗೂ ಬಾರ್‌ಗಳ ಮೇಲೆ ದಾಳಿ ನಡೆಸಿ ರೌಡಿಗಳಿಗೆ ಚಳಿಯಲ್ಲೂ ಬೆವರಿಳಿಸಿದ್ದಾರೆ. ನಿರ್ಜನ (ಅಪಾಯದ)ಪ್ರದೇಶಗಳಲ್ಲಿ ನಿರಂತರ ನಿಗಾ ಮತ್ತು ಗುಪ್ತಚರ ಆಧಾರಿತ ಕಾರ್ಯಾಚರಣೆಗಳು ಮುಂದುವರೆಯುತ್ತವೆ. ಹಾಗೂ ದಾಳಿ ಸಂದರ್ಭದಲ್ಲಿ ಪತ್ತೆಯಾದ ರೌಡಿಗಳ ಪರಿಶೀಲನೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರ ಭದ್ರತೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ನಗರ ಪೊಲೀಸ್ ಆಯುಕ್ತರು ತಮ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ, ಜೊತೆಗೆ ಕಾನೂನು ಪ್ರಕ್ರಿಯೆಯನ್ನು ಪಾಲಿಸುವುದನ್ನು ಖಚಿತಪಡಿಸಿದ್ದಾರೆ.
Advertisement