
ಬೆಂಗಳೂರು: ವಸತಿ ಗೃಹದಲ್ಲಿ ಜೊತೆಯಲ್ಲಿ ವಾಸವಾಗಿದ್ದ ಗೆಳತಿ ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಗೆಳೆಯ ಆಕೆಯನ್ನು ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಯು ಸಂತ್ರಸ್ತೆಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ ಎಂದು ಸಹ ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶದ ಮೂಲದ ಸಾಯಿ ಬಾಬು ಚೆನ್ನೂರು (37ವ) ಎಂದು ಗುರುತಿಸಲಾಗಿದೆ.
ಆತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಪತ್ನಿ ಮತ್ತು ಮಕ್ಕಳು ಊರಿನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ 24 ವರ್ಷದ ಯುವತಿ ಜೊತೆ ವೈಟ್‌ಫೀಲ್ಡ್‌ನ ವೈಟ್‌ರೋಸ್ ಲೇಔಟ್‌ನಲ್ಲಿರುವ ಪ್ರೊ4, ಲಿವಿಂಗ್ ಟುಗೆದರ್ ಪಿಜಿ ವಸತಿ ಸೌಕರ್ಯದಲ್ಲಿ ವಾಸಿಸುತ್ತಿದ್ದ.
ಮೊನ್ನೆ ಸೆಪ್ಟೆಂಬರ್ 16 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ, ಚೆನ್ನೂರು ಸಂತ್ರಸ್ತೆಯ ಕೋಣೆಯ ಬಾಗಿಲು ಬಡಿದು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ. ಆಕೆ ತಾನು ಋತುಚಕ್ರದ ಸಮಯದಲ್ಲಿದ್ದೇನೆ ಎಂದು ಹೇಳಿದರೂ ಕೇಳದೆ ಕಿರುಕುಳ ನೀಡುತ್ತಲೇ ಇದ್ದನು. ಆಕೆ ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಅವನು ಅವಳ ಬೆನ್ನಿನ ಎಡಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಆಕೆಗೆ ಗಾಯಗಳಾಗಿವೆ.
ನಂತರ ಅವನು ಅವಳನ್ನು ವಿವಸ್ತ್ರಗೊಳಿಸಿ, ಫೋಟೋಗಳನ್ನು ತೆಗೆದು 70,000 ರೂಪಾಯಿ ಕೊಡು ಇಲ್ಲದಿದ್ದರೆ ನಿನ್ನ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಈ ಘೋಟೋ, ವಿಡಿಯೊಗಳನ್ನು ಕಳುಹಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ.
ಸಂತ್ರಸ್ತೆ ಸ್ನೇಹಿತನಿಂದ ಹಣವನ್ನು ಸಾಲ ಪಡೆದು ನೀಡುವುದಾಗಿ ಹೇಳಿದಾಗ, ಆರೋಪಿ ಆಕೆಯ ಫೋನ್ ತೆಗೆದುಕೊಂಡು ಆನ್‌ಲೈನ್ ಪಾವತಿ ಮೂಲಕ 17,000 ರೂ.ಗಳನ್ನು ವರ್ಗಾಯಿಸಿಕೊಂಡು ಅದೇ ದಿನ ನಸುಕಿನ ಜಾವ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ, ನಡೆದ ಘಟನೆಯನ್ನೆಲ್ಲಾ ಯುವತಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಹೇಳಿದ್ದಾಳೆ. ಸ್ನೇಹಿತರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ-ಕಾನೂನು ಪ್ರಕರಣ (MLC) ವರದಿಯ ಆಧಾರದ ಮೇಲೆ, ಸಂತ್ರಸ್ತೆಯಿಂದ ದೂರು ದಾಖಲಿಸಿದ್ದಾರೆ.
ಕೊಲೆ ಯತ್ನ, ಹಲ್ಲೆ, ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಕ್ರಿಮಿನಲ್ ಬಲಪ್ರಯೋಗ, ಲೈಂಗಿಕ ಕಿರುಕುಳ ಮತ್ತು ಸುಲಿಗೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚೆನ್ನೂರು ಸಂಜೆ ರೂಮಿಗೆ ಹಿಂತಿರುಗಿದಾಗ ಇತರ ನಿವಾಸಿಗಳು ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಐವರ ವಿರುದ್ಧ ಹಲ್ಲೆ ದೂರು
ಚೆನ್ನೂರು ಬುಧವಾರ ಪಿಜಿ ನಿರ್ವಹಣಾ ಸಿಬ್ಬಂದಿ ಸೇರಿದಂತೆ ಐದು ಜನರ ವಿರುದ್ಧ ಹಲ್ಲೆ ದೂರು ದಾಖಲಿಸಿದ್ದಾನೆ. ತನ್ನ ದೂರಿನಲ್ಲಿ, ಕಳೆದ ಎರಡು ತಿಂಗಳಿನಿಂದ ಸಂತ್ರಸ್ತೆಯೊಂದಿಗೆ ಸಂಬಂಧ ಹೊಂದಿದ್ದಾಗಿ ಮತ್ತು ಪಿಜಿಯಿಂದ ಹೊರಡುವ ಮೊದಲು ಆಕೆಯೊಂದಿಗೆ ಜಗಳವಾಡಿದ್ದಾಗಿ ಹೇಳಿಕೊಂಡಿದ್ದಾನೆ. ಆ ರಾತ್ರಿ ಅವರು ಹಿಂತಿರುಗಿದಾಗ, ಪಿಜಿ ನಿರ್ವಹಣಾ ಸಿಬ್ಬಂದಿ ಪ್ರದೀಪ್ ಮತ್ತು ಶಿವ ಸೇರಿದಂತೆ ಮೂವರು ಇತರರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾನೆ.
Advertisement