
ಬೆಂಗಳೂರು: ನಗರದಲ್ಲಿ ಕೇವಲ 8 ತಿಂಗಳಿನಲ್ಲಿ 50ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಬಲೆಗೆ ಬಿದ್ದಿರುವುದು, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಬೇರೂರಿಗೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಕಿಡಿಕಾರಿದೆ.
ವೈದ್ಯರ ಪತ್ನಿಯಿಂದ 25,000 ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಡಾ. ಎಸ್. ರಾಮಾನುಜ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ ನ್ಯಾಯಾಲಯ ಈ ಅಭಿಪ್ರಾಯಗಳನ್ನು ನೀಡಿದೆ.
ಲಂಚ ನೀಡದೆ ಯಾವುದೇ ಕೆಲಸವನ್ನು ಸರ್ಕಾರಿ ಕಚೇರಿಗಳಿಂಗ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂತಹ ಭಾವನೆ ಮೂಡತೊಡಗಿದೆ. ಕೆಲ ವ್ಯಕ್ತಿಗಳು ಇಂತಹ ಭ್ರಷ್ಟ್ರ ಅಧಿಕಾರಿಗಳ ಕುರಿತು ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಏಕೆಂದರೆ ಅಧಿಕಾರಿಕ್ಕೆ ಬಂದ ವ್ಯಕ್ತಿ ಕೂಡ ಲಂಚ ಕೊಟ್ಟೇ ಸ್ಥಾನ ಗಿಟ್ಟಿಸಿಕೊಂಡಿರುತ್ತಾನೆ. ಆದರೆ, ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಮಧ್ಯಮ ವರ್ಗದ, ಬಡ ಮತ್ತು ಅಸಹಾಯಕ ಜನರು ಇಲ್ಲಿ ಬಲಿಪಶುಗಳಾಗುತ್ತಿದ್ದಾರೆ. ವ್ಯವಸ್ಥೆಯಲ್ಲಿ ಇವರು ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ನಾವು ಯೋಚಿಸುತ್ತಿಲ್ಲ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಭ್ರಷ್ಟಾಚಾರದ ಕ್ಯಾನ್ಸರ್ ಎಂಬ ಬೀಜವು ಸಾಂವಿಧಾನಿಕ ಉದ್ದೇಶವನ್ನೇ ಕೊಲ್ಲುತ್ತಿದೆ. ಆದ್ದರಿಂದ, ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ಈ ಪಿಡುಗನ್ನು ಕೊನೆಗಾಣಿಸುವ ಜವಾಬ್ದಾರಿಯನ್ನು ಅರಿತುಕೊಳ್ಳುವ ಸಮಯ ಇದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಡಿ ಎಚ್ ಗುರುಪ್ರಸಾದ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್ 10, 2025 ರಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಶಿರಾ ಪಟ್ಟಣದ ಸಿಮೆಂಟ್ ಅಂಗಡಿಯೊಂದಕ್ಕೆ ಸಂಬಂಧಿಸಿದಂತೆ 2018-19 ನೇ ಸಾಲಿಗೆ ಎಸ್‌ಜಿಎಸ್‌ಟಿಯಾಗಿ 2.79 ಲಕ್ಷ ರೂ. ಮತ್ತು ಸಿಜಿಎಸ್‌ಟಿಯಾಗಿ 2.79 ಲಕ್ಷ ರೂ. ಪಾವತಿಸುವಂತೆ ಒತ್ತಾಯಿಸಿ ಶಿರಾದ ವಾಣಿಜ್ಯ ತೆರಿಗೆ ಅಧಿಕಾರಿಗಳು ದೂರುದಾರರ ಪತ್ನಿ ಡಿ ಜಿ ಗಾಯತ್ರಿ ಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ದೂರುದಾರರು 75,000 ರೂ. ಪಾವತಿಸಲು ಕಷ್ಟವಾಗುತ್ತದೆ ಎಂದು ಹೇಳಿದಾಗ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಡಾ. ಎಸ್. ರಾಮಾನುಜ ಅವರು 25,000 ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಈ ಆರೋಪವನ್ನು ರಾಮಾನುಜ ಅವರ ನಿರಾಕರಿಸಿದ್ದು, ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.
ವಿಚಾರಣೆ ವೇಳೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಆಕ್ಷೇಪಣೆಗಳನ್ನು ಉಲ್ಲೇಖಿಸಿ ನ್ಯಾಯಾಲಯವು, ಪ್ರಮುಖ ಸಾಕ್ಷಿಗಳಿಂದ ಹೇಳಿಕೆಗಳ ದಾಖಲಾತಿ ಇನ್ನೂ ಬಾಕಿ ಇದೆ ಎಂಬುದನ್ನು ಗಮನಿಸಿದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ, ದೂರುದಾರರಿಗೆ ಬೆದರಿಕೆ ಹಾಕುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಎಂದು ಹೇಳಿದ್ದು, ಜಾಮೀನು ನೀಡಲು ನಿರಾಕರಿಸಿದೆ.
Advertisement