
ಬೆಂಗಳೂರು: ಕುಡಿದು ವಾಹನ ಚಾಲನೆ ತಪಾಸಣೆ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಹಾಗೂ ಬ್ರೀತ್ ಅನಲೈಸರ್ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ ಆರೋಪದ ಮೇಲೆ 29 ವರ್ಷದ ಯುವಕನನ್ನು ಶನಿವಾರ ಬಂಧಿಸಲಾಗಿದೆ.
ಇಂದಿರಾ ನಗರದ ಪಬ್ ವೊಂದರ ಬಳಿ ಸೆಪ್ಟೆಂಬರ್ 26 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಆದಿತ್ಯ ಅಗರ್ವಾಲ್ ಎಂದು ಗುರುತಿಸಲಾಗಿದ್ದು, ಪರೀಕ್ಷೆಗೆ ನಿಲ್ಲಿಸಿದಾಗ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ.
ಆತ ಬ್ರೀತ್ ಅನಲೈಸರ್ ಪರೀಕ್ಷೆ ನಿರಾಕರಿಸುವ ಮೂಲಕ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಕನ್ನಡದ ಬದಲಿಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಬೇಕೆಂದು ಒತ್ತಾಯಿಸಿದ್ದಾನೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತನಗೆ ಕನ್ನಡ ಬರುವುದಿಲ್ಲ ಎಂದು ಅಗರ್ವಾಲ್ ಅಧಿಕಾರಿಯ ಮೇಲೆ ಕಿಡಿಕಾರುವುದು ವಿಡಿಯೋದಲ್ಲಿದೆ. ಪೊಲೀಸರೊಂದಿಗೆ ಮಾತಿನ ಚಕಮಕಿ ನಂತರ ಆತ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದರೆ ಸುಮಾರು 20 ಮೀಟರ್ ಮುಂದೆ ಸಾಗಿದ ನಂತರ ಆತನನ್ನು ಪೊಲೀಸರು ತಡೆದಿದ್ದಾರೆ. ಆತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ 12-05ರ ಸುಮಾರಿನಲ್ಲಿಕಂಠಪೂರ್ತಿ ಕುಡಿದಿದ್ದ ಅಗರ್ವಾಲ್ ತಪಾಸಣೆಯ ಸಮಯದಲ್ಲಿ ಅಸಭ್ಯ ಭಾಷೆ ಬಳಸಿದ್ದು, ಉದ್ದೇಶಪೂರ್ವಕವಾಗಿ ಅವಮಾನಿಸಿರುವುದಾಗಿ ಮಹಿಳಾ ಪೊಲೀಸ್ ಅಧಿಕಾರಿ ದೂರಿನಲ್ಲಿ ಆರೋಪಿಸಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 351 (2) (ಅಪರಾಧ ಬೆದರಿಕೆ), ಮತ್ತು 132 (ಸಾರ್ವಜನಿಕ ಸೇವಕರನ್ನು ಕರ್ತವ್ಯ ನಿರ್ವಹಣೆಯಿಂದ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಗರ್ವಾಲ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement