
ಬೆಂಗಳೂರು: ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ವ್ಯಾಪಕ ಪ್ರತಿಭಟನೆಗಳಿಗೆ ಕೊನೆಗೂ ಮಣಿದ ರಾಜ್ಯ ಸರ್ಕಾರ, ಸೋಮವಾರ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಅತಿಥಿ ಉಪನ್ಯಾಸಕರ ನೇಮಕ ವಿಚಾರ ಸಂಬಂಧ ಸೆಪ್ಟೆಂಬರ್ 29 ರಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಅವರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆದ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನೇ ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರಿಸಲು ಅನುಮತಿ ನೀಡಲಾಗಿದೆ.
ಈ ರೀತಿ ಮುಂದುವರಿಕೆ ನಂತರವೂ ಕಾರ್ಯಭಾರವಿದ್ದಲ್ಲಿ ಅಂತಹ ಕಾರ್ಯಭಾರಕ್ಕೆ ಎದುರಾಗಿ ನ್ಯಾಯಾಲಯದ ಮಧ್ಯಂತರ ಆದೇಶದ ಅನುಸಾರ ಪ್ರಸ್ತುತ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.
ಈ ನಡುವೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಒತ್ತಾಯಿಸಿ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಎಐಡಿಎಸ್ಒ (ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ) ನೇತೃತ್ವದ ವಿದ್ಯಾರ್ಥಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ವಿದ್ಯಾರ್ಥಿಗಳ ಕೂಗಿಗೆ ಸರ್ಕಾರ ಸ್ಪಂದಿಸಿರುವುದನ್ನು AIDSO ಸ್ವಾಗತಿಸುತ್ತದೆ. ಆದಾಗ್ಯೂ, ಪ್ರತಿ ವಿಷಯಕ್ಕೆ ಕನಿಷ್ಠ 30 ಗಂಟೆಗಳ ಬೋಧನೆ ಪೂರ್ಣಗೊಂಡ ನಂತರವೇ ಪರೀಕ್ಷೆಗಳನ್ನು ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.
Advertisement