'13 ರೂ. ಮೌಲ್ಯದ ಚೀಲಗಳನ್ನು 52 ರೂ.ಗೆ ಖರೀದಿ’: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ಶಾಕ್, ತನಿಖೆಗೆ ಅನುಮತಿ

2009 ಬ್ಯಾಚ್‌ನ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಮಾರುಕಟ್ಟೆಯಲ್ಲಿ 13 ರೂಪಾಯಿ ದರ ಇರುವ ಚೀಲಗಳನ್ನು ಕರ್ನಾಟಕ ಹ್ಯಾಂಡ್ಲೂಮ್ ಡೆವಲಪ್‌ಮೆಂಟ್ ಕಾರ್ಪೋರೇಶನ್ (KHDC) ಮೂಲಕ ಪ್ರತಿ ಚೀಲಕ್ಕೆ 52 ರೂಪಾಯಿ ದರದಲ್ಲಿ ಖರೀದಿಸಲು ಅನುಮೋದನೆ ನೀಡಿದ್ದರು.
IAS officer Rohini Sindhuri
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ
Updated on

ಬೆಂಗಳೂರು: ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ, ಮೈಸೂರು ನಗರ ಪಾಲಿಕೆ ಮತ್ತು ಇತರೆ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಪರಿಸರ ಸ್ನೇಹಿ ಚೀಲಗಳ ಖರೀದಿಯಲ್ಲಿ ನಡೆದ ಅಕ್ರಮಗಳ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ನೀಡುವಂತೆ ನಿರ್ದೇಶಿಸಿದೆ.

ಈ ಅಕ್ರಮಗಳು 2021ರಲ್ಲಿ, ರೋಹಿಣಿ ಸಿಂಧೂರಿ ಮೈಸೂರು ಉಪ ಆಯುಕ್ತರಾಗಿದ್ದ ವೇಳೆ ನಡೆದವು ಎಂದು ಆರೋಪಿಸಲಾಗಿದೆ. 2009 ಬ್ಯಾಚ್‌ನ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಮಾರುಕಟ್ಟೆಯಲ್ಲಿ 13 ರೂಪಾಯಿ ದರ ಇರುವ ಚೀಲಗಳನ್ನು ಕರ್ನಾಟಕ ಹ್ಯಾಂಡ್ಲೂಮ್ ಡೆವಲಪ್‌ಮೆಂಟ್ ಕಾರ್ಪೋರೇಶನ್ (KHDC) ಮೂಲಕ ಪ್ರತಿ ಚೀಲಕ್ಕೆ 52 ರೂಪಾಯಿ ದರದಲ್ಲಿ ಖರೀದಿಸಲು ಅನುಮೋದನೆ ನೀಡಿದ್ದು, ಇದರಿಂದ ಸರ್ಕಾರಕ್ಕೆ 5.88 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇಲಾಖಾ ತನಿಖೆಯಲ್ಲಿ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ನಿರ್ದೋಷಿ ಎಂದು ಘೋಷಿಸಿದ್ದರಿಂದ ಮಾತ್ರ ಅದೇ ವಿಷಯದ ಆಧಾರದ ಮೇಲೆ ಕ್ರಿಮಿನಲ್ ತನಿಖೆ ಪ್ರಾರಂಭಿಸಲು ತಡೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಲು ಅಧೀನ ಕಾರ್ಯದರ್ಶಿ, ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಭ್ರಷ್ಟಾಚಾರ ಕ್ಯಾನ್ಸರ್, ಪ್ಲೇಗ್ ಇದ್ದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗೇ ಬಿಟ್ಟರೆ ಪ್ರಜಾಸತ್ತಾತ್ಮಕ ಅಂಗಗಳನ್ನು ಅಸ್ಥಿರಗೊಳಿಸುತ್ತದೆ. ಭ್ರಷ್ಟಾಚಾರದ ಆರೋಪವಿದ್ದಾಗ ತನಿಖೆ ನಡೆಯದೇ ಸತ್ಯ ಬಹಿರಂಗವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ ನಾಲ್ಕು ವಾರಗಳೊಳಗೆ ಅನುಮತಿ ನೀಡಿ, ರೋಹಿಣಿ ಸಿಂಧೂರಿ ಹಾಗೂ ಆಗಿನ ಕರ್ನಾಟಕ ಹ್ಯಾಂಡ್ಲೂಮ್ ಡೆವಲಪ್‌ಮೆಂಟ್ ಕಾರ್ಪೋರೇಶನ್‌ನ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲು ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ನ್ಯಾಯಾಲಯದ ಪ್ರಕಾರ, ಪ್ರತಿ ಚೀಲದ ಮಾರುಕಟ್ಟೆ ದರ 13 ರೂಪಾಯಿ ಇದ್ದರೂ, ಜಿಲ್ಲಾಧಿಕಾರಿ ನಿರ್ಧಾರದ ಆಧಾರದ ಮೇಲೆ 52 ರೂಪಾಯಿಗೆ ಖರೀದಿ ಮಾಡಲು ಮುಂದಾಗಲಾಗಿದೆ. ಇದಲ್ಲದೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಕಲ್ಯಾಣ ಯೋಜನೆಗಳಿಗೆ ಮೀಸಲಾಗಿದ್ದ ಹಣವನ್ನು ಚೀಲ ಖರೀದಿಗೆ ಬಳಸಲಾಗಿದೆ ಎಂದು ಹೇಳಲಾಗಿದೆ.

ಸೆಕ್ಷನ್ 17A ಅಡಿಯಲ್ಲಿ ಕೇಳಲಾದ ಅನುಮತಿ, ಪ್ರಾಥಮಿಕ ದೃಷ್ಟಿಯಲ್ಲಿ ಭ್ರಷ್ಟಾಚಾರದ ಅಂಶಗಳನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕ್ಲೀನ್ ಚಿಟ್ ಇದ್ದರೂ ಕ್ರಿಮಿನಲ್ ಪ್ರಕರಣ ದಾಖಲಿಸಲು ತಡೆಯಿಲ್ಲ: ಹೈಕೋರ್ಟ್

ನ್ಯಾಯಮೂರ್ತಿ ನಾಗಪ್ರಸನ್ನ ಅವರು ಮಾರ್ಚ್ 27ರಂದು ಈ ಆದೇಶ ಹೊರಡಿಸಿದ್ದು, ಮೈಸೂರು ಮೂಲದ ವಕೀಲ ರವಿಚಂದ್ರೇಗೌಡ ಎನ್.ಆರ್ ಸಲ್ಲಿಸಿದ ಅರ್ಜಿಯನ್ನು ಅನುಮೋದಿಸಿದ್ದಾರೆ. ಈ ಅರ್ಜಿಯಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಸೆಕ್ಷನ್ 17A ಅಡಿಯಲ್ಲಿ ಅನುಮತಿ ನಿರಾಕರಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಮನವಿ ಮಾಡಲಾಗಿತ್ತು.

ಲೋಕಾಯುಕ್ತ ಪೊಲೀಸರ ಅನುಮತಿ ವಿನಂತಿಯನ್ನು ತಿರಸ್ಕರಿಸಿದ ಇಲಾಖೆಯ ಆದೇಶವು, ರೋಹಿಣಿ ಸಿಂಧೂರಿ ಇಲಾಖಾ ತನಿಖೆಯಲ್ಲಿ ನಿರ್ದೋಷಿ ಎಂದು ಹೇಳುವುದನ್ನು ಹೊರತುಪಡಿಸಿ ಹಿಂದಿನ ಆದೇಶದಂತೆಯೇ ಇದೆ ಎಂದು ನ್ಯಾಯಾಲಯ ಹೇಳಿದೆ.

ಯಾವುದೇ ಅಧಿಕಾರಿಯನ್ನು ಇಲಾಖಾ ತನಿಖೆಯಲ್ಲಿ ನಿರ್ದೋಷಿ ಎಂದು ಘೋಷಿಸಿದರೂ, ಅದರಿಂದ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೆ ತಡೆ ಇರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಹಪೀಠ ಈಗಾಗಲೇ ವಿಚಾರವನ್ನು ಮರುಪರಿಶೀಲಿಸಲು ಸೂಚಿಸಿದ್ದರೂ, ಸರ್ಕಾರ ತನ್ನ ಹಿಂದಿನ ನಿಲುವನ್ನೇ ಪುನರಾವರ್ತಿಸಿದೆ. ಮುಖ್ಯ ಕಾರ್ಯದರ್ಶಿಗೆ ಎಫ್‌ಐಆರ್ ದಾಖಲಿಸಲು ಹಾಗೂ ಕಾನೂನು ಪ್ರಕಾರ ತನಿಖೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರ ಪ್ರಕಾರ, 5 ಕೆಜಿ ಮತ್ತು 10 ಕೆಜಿ ಸಾಮರ್ಥ್ಯದ ಒಟ್ಟು 14,71,458 ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಪ್ರತಿ ಚೀಲಕ್ಕೆ 52 ರೂಪಾಯಿ (ಜಿಎಸ್‌ಟಿ ಸೇರಿ) ದರದಲ್ಲಿ 7.65 ಕೋಟಿ ವೆಚ್ಚದಲ್ಲಿ ಖರೀದಿಸಲು ಆದೇಶ ನೀಡಲಾಗಿದ್ದು, ಇದರಿಂದ ಸರ್ಕಾರಕ್ಕೆ 5.88 ಕೋಟಿ ರೂಪಾಯಿ ನಷ್ಟವಾಗಿದೆ.

ಈ ಕುರಿತು ಅರ್ಜಿದಾರರು 2021ರ ಡಿಸೆಂಬರ್ 17ರಂದು ದೂರು ಸಲ್ಲಿಸಿದ್ದು, ಸೆಕ್ಷನ್ 17A ಅಡಿಯಲ್ಲಿ ಅನುಮತಿ ಕೇಳಲಾಗಿತ್ತು. ಇದನ್ನು 2022ರ ಸೆಪ್ಟೆಂಬರ್ 19ರಂದು ತಿರಸ್ಕರಿಸಲಾಗಿತ್ತು. ನಂತರ 2025ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, 2025ರ ಫೆಬ್ರವರಿ 20ರಂದು ಸಹಪೀಠ ಅದನ್ನು ರದ್ದುಪಡಿಸಿ ಮರುಪರಿಶೀಲಿಸಲು ಸರ್ಕಾರಕ್ಕೆ ಕಳುಹಿಸಿತ್ತು.

ಆದರೆ, ಕಳೆದ ವರ್ಷ ಮೇ 26ರಂದು DPAR ಮತ್ತೆ ಅನುಮತಿಯನ್ನು ತಿರಸ್ಕರಿಸಿದ್ದು, ಇದನ್ನು ಮತ್ತೆ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com