

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ಬಳಕೆ ಕುಸಿತ ಕಂಡುಬಂದಿದ್ದು, ಮರುಪೂರಣ ಸಾಮರ್ಥ್ಯದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಸಚಿವ ಎನ್.ಭೋಸರಾಜು ಅವರು ಹೇಳಿದ್ದಾರೆ.
2025ರ ಅಂತರ್ಜಲ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡಿದ ಅವರು, ಉತ್ತಮ ಮಳೆ, ನೀರಿನ ಸಂರಕ್ಷಣಾ ಕ್ರಮಗಳು ಮತ್ತು ಸರ್ಕಾರದ ನೀತಿಗಳಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.
ಕಳೆದ ವಾರ್ಷಿಕ ಸಾಲಿನಲ್ಲಿ ಉತ್ತಮ ಮಳೆ ಆಗಿದೆ. ಜೊತೆಗೆ, ರಾಜ್ಯ ಸರಕಾರದ ಭದ್ರ ಜಲ ಸಂರಕ್ಷಣಾ ನೀತಿಗಳ ಯಶಸ್ಸಿನ ಫಲವಾಗಿ, ಕರ್ನಾಟಕವು ಅಂತರ್ಜಲ ಸೂಚ್ಯಂಕಗಳಲ್ಲಿ ಗಮನಾರ್ಹ ಸುಧಾರಣೆಯನ್ನು ದಾಖಲಿಸಿದೆ. ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆಯಾಗಿ ಅಂತರ್ಜಲ ಬಳಕೆಯು ಗಣನೀಯವಾಗಿ ಇಳಿಕೆಯಾಗಿದ್ದು, ವಾರ್ಷಿಕವಾಗಿ ಅಂತರ್ಜಲ ಮರುಪೂರಣ ಸಾಮರ್ಥ್ಯದಲ್ಲಿ ಭಾರಿ ಏರಿಕೆಯಾಗಿದೆ ಎಂದು ತಿಳಿಸಿದರು.
ರಾಜ್ಯದ ಒಟ್ಟಾರೆ ಅಂತರ್ಜಲ ಬಳಕೆಯು 2024ರಲ್ಲಿದ್ದ ಶೇ.68.44ರಿಂದ 2025ರಲ್ಲಿ ಶೇ.66.49ಕ್ಕೆ ಇಳಿಕೆಯಾಗಿದ್ದು, ಈ ಸಕಾರಾತ್ಮಕ ಇಳಿಕೆಯು, ರಾಜ್ಯಾದ್ಯಂತ ಲಭ್ಯವಿರುವ ವಾರ್ಷಿಕ ಅಂತರ್ಜಲದಲ್ಲಿ ಸರಾಸರಿ ಶೇ.66.5ರಷ್ಟನ್ನು ಮಾತ್ರ ಪ್ರಸ್ತುತ ಬಳಸಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ, ಒಟ್ಟು ವಾರ್ಷಿಕ ಅಂತರ್ಜಲ ಮರುಪೂರಣ ಪ್ರಮಾಣವು 2024ರಲ್ಲಿದ್ದ 18.74 ಬಿಲಿಯನ್ ಕ್ಯೂಬಿಕ್ ಮೀಟರ್ ನಿಂದ 2025ರಲ್ಲಿ 19.28ಗೆ ಗಮನಾರ್ಹವಾಗಿ ಏರಿಕೆಯಾಗಿದೆ ಎಂದು ಸಚಿವರು ವಿವರಿಸಿದರು.
ಇದಕ್ಕೆ ಪೂರಕವಾಗಿ, ಕರ್ನಾಟಕದ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. 2024ರಲ್ಲಿ 18.74 ಶತಕೋಟಿ ಕ್ಯೂಬಿಕ್ ಮೀಟರ್ (ಬಿಸಿಎಂ) ಇದ್ದ ವಾರ್ಷಿಕ ಅಂತರ್ಜಲ ಮರುಪೂರಣ ಪ್ರಮಾಣವು 2025ರಲ್ಲಿ 19.28 ಬಿಸಿಎಂಗೆ ಏರಿಕೆಯಾಗಿದೆ. ಇದರಿಂದ ಅಂತರ್ಜಲ ಸಂಪನ್ಮೂಲವು 16.88 ಬಿಸಿಎಂನಿಂದ 17.41ಕ್ಕೆ ಏರಿಕೆ ಆದಂತಾಗಿದೆ. ಜಲ ಸಂರಕ್ಷಣಾ ರಚನೆಗಳಿಂದ 2024ರಲ್ಲಿ 0.81 ಬಿಸಿಎಂ ಇದ್ದ ಅಂತರ್ಜಲ ಮರುಪೂರಣವು 2025ರಲ್ಲಿ 1.04 ಬಿಸಿಎಂಗೆ ಏರಿಕೆಯಾಗಿದ್ದು, ಸರಾಸರಿ ಶೇ.29.11ರಷ್ಟು ಜಿಗಿತ ಕಂಡಂತಾಗಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ ಇಂತಹ ಜಲಸಂರಕ್ಷಣಾ ಕಾಮಗಾರಿಗಳ ಸಂಖ್ಯೆ 3,15,284ರಿಂದ 3,94,060ಕ್ಕೆ ಏರಿಕೆಯಾಗಿರುವುದು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
2024 ಸಾಲಿನ ದತ್ತಾಂಶಗಳಿಗೆ ಹೋಲಿಸಿದರೆ 11 ತಾಲೂಕುಗಳ ಅಂತರ್ಜಲ ಸ್ಥಿತಿಗತಿಯಲ್ಲಿ ಸುಧಾರಣೆ ಕಂಡುಬಂದಿದೆ. ಚಾಮರಾಜನಗರ ತಾಲೂಕು ‘ಅತಿ-ಬಳಕೆ’ ಪಟ್ಟಿಯಿಂದ ‘ನಿರ್ಣಾಯಕ’ ಹಂತದ ಪಟ್ಟಿಗೆ ವರ್ಗಾವಣೆಯಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಅದೇ ರೀತಿ, ಬೆಳಗಾವಿಯ ಅಥಣಿ, ಬೆಂಗಳೂರು ದಕ್ಷಿಣದ ಚನ್ನಪಟ್ಟಣ, ಚಿತ್ರದುರ್ಗದ ಮೊಳಕಾಲ್ಮೂರು ಹಾಗೂ ಹಾವೇರಿಯ ರಾಣೆಬೆನ್ನೂರು, ಸವಣೂರು ಮತ್ತು ಶಿಗ್ಗಾಂವಿ ತಾಲೂಕುಗಳು ‘ಅರೆ-ನಿರ್ಣಾಯಕ’ ಸ್ಥಿತಿಯಿಂದ ಸಂಪೂರ್ಣ ‘ಸುರಕ್ಷಿತ’ ವರ್ಗಕ್ಕೆ ಯಶಸ್ವಿಯಾಗಿ ಬಡ್ತಿ ಪಡೆದಿವೆ.
ಜೊತೆಗೆ, ಗೃಹಬಳಕೆಯ ಅಂತರ್ಜಲ ಅವಲಂಬನೆಯೂ ತಗ್ಗುತ್ತಿದೆ. ಗೃಹಬಳಕೆಯ ಅಂತರ್ಜಲ ಹೊರತೆಗೆಯುವಿಕೆ ಶೇ.0.58 ರಷ್ಟು ಕಡಿತಗೊಂಡಿದ್ದು, 2024ರಲ್ಲಿ ಇದ್ದ 1,21,731 ಹೆಕ್ಟೇರ್- ಮೀಟರ್‌ನಿಂದ 2025 ರಲ್ಲಿ 1,21,023 ಹೆಕ್ಟೇರ್- ಮೀಟರ್‌ಗೆ ಇಳಿಕೆಯಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಜನರು ಅಂತರ್ಜಲದ ಬದಲಾಗಿ ಮೇಲ್ಮೈ ನೀರಿನ ಮೂಲಗಳತ್ತ ಯಶಸ್ವಿಯಾಗಿ ಮುಖಮಾಡಿರುವುದು ಈ ಕಡಿತಕ್ಕೆ ಪ್ರಮುಖ ಕಾರಣವಾಗಿದೆ.
ಈ ಸಕಾರಾತ್ಮಕ ಬೆಳವಣಿಗೆಗೆ ಕಳೆದ ಸಾಲಿನಲ್ಲಿ ಆದಂತಹ ಉತ್ತಮ ಮಳೆ ಹಾಗೂ ಸರಕಾರದ ದೂರದೃಷ್ಟಿಯ ಯೋಜನೆಗಳು ಪ್ರಮುಖ ಕಾರಣವಾಗಿದೆ. ಅಂತರ್ಜಲ ಬಳಕೆಯಲ್ಲಿ ಗಣನೀಯ ಇಳಿಕೆ ಮತ್ತು ನಮ್ಮ ವಾರ್ಷಿಕ ಮರುಪೂರಣ ಪ್ರಮಾಣದಲ್ಲಿನ ಏರಿಕೆಯು, ಜಲ ಸುಸ್ಥಿರತೆಯ ಕಡೆಗಿನ ನಮ್ಮ ಸರಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ವೈಜ್ಞಾನಿಕ ಜಲ ನಿರ್ವಹಣೆ, ಕೆರೆಗಳ ಪುನರುಜ್ಜೀವನ ಯೋಜನೆಗಳು ಮತ್ತು ಕರ್ನಾಟಕದಾದ್ಯಂತ ಜಲ ಸಂರಕ್ಷಣಾ ರಚನೆಗಳ ನಿರ್ಮಾಣದ ಮೂಲಕ, ಅಂತರ್ಜಲದ ಮರುಪೂರಣವನ್ನು ಹೆಚ್ಚಿಸಿದ್ದೇವೆ. ಅಲ್ಲದೇ, ಜನಜಾಗೃತಿಯ ಅಭಿಯಾನದ ಮೂಲಕ ಅತಿಯಾದ ಬಳಕೆಯನ್ನು ನಾವು ಯಶಸ್ವಿಯಾಗಿ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದಲ್ಲದೆ, ನಮ್ಮ ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಯೋಜನೆಗಳು ಅತ್ಯುತ್ತಮ ಫಲಿತಾಂಶಗಳನ್ನು ನೀಡಿದ್ದು, ಕೆರೆ-ಕುಂಟೆಗಳ ಮೂಲಕ ಆಗುವ ಮರುಪೂರಣ ಶೇ.4.48ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಇನ್ನು ಮುಂದೆ ಅಂತರ್ಜಲವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂರಕ್ಷಿಸಲು ಡಿಜಿಟಲ್ ವಾಟರ್ ಸ್ಟ್ಯಾಕ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಡಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಉಪಗ್ರಹ ಮೇಲ್ವಿಚಾರಣೆಯ ಮೂಲಕ ಅಂತರ್ಜಲದ ಸ್ಥಿತಿಯನ್ನು ನೇರವಾಗಿ ಗಮನಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
Advertisement