

ರಾಯಚೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಕ್ಕಮಗಳೂರು ಮೂಲದ ಎಂಟು ಭಕ್ತರು ಮೃತಪಟ್ಟಿದ್ದಾರೆ. ರಾಯರ ದರ್ಶನಕ್ಕೆ ಬೊಲೆರೋ ವಾಹನದಲ್ಲಿ ತೆರಳುತ್ತಿದ್ದಾಗ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ಮೂಲದ ಭಕ್ತರು ಬೊಲೆರೋ ವಾಹನದ ಮೂಲಕ ರಾಯರ ದರ್ಶನಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಬೊಲೆರೋ ವಾಹನಕ್ಕೆ ಸಿಮೆಂಟ್ ಮತ್ತು ಜಲ್ಲಿಕಲ್ಲು ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಬೊಲೆರೋ ವಾಹನದಲ್ಲಿ ಒಟ್ಟು 21 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಮೂಲದ ಅಮೃತ, ತೇಜಸ್ವಿನಿ, ಧನ್ಯ, ದೀಪಿಕ, ದೀಕ್ಷಿತ, ಪ್ರತಾಪ್, ಕುಮಾರ್, ಯಶೋದಮ್ಮ ಮೃತರು. ಮೂರು ವರ್ಷದ ಮಗು ಸೇರಿ ಐವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
21 ಜನರ ಪೈಕಿ ಆರು ಭಕ್ತರು ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಇಬ್ಬರು ಎಮಿಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಕಾರಿಯಾಗದೇ ಉಸಿರು ಚೆಲ್ಲಿದ್ದಾರೆ. ಇನ್ನುಳಿದ 13 ಜನರಿಗೆ ಎಮಿಗನೂರು ಹಾಗೂ ಕರ್ನೂಲ್ ಸರ್ಕಾರಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮಂತ್ರಾಲಯಕ್ಕೆ ಹೋಗುತ್ತಿದ್ದ ಬೊಲೆರೋ ವಾಹನಕ್ಕೆ ಬೀದರ್‌ನಿಂದ ತುಮಕೂರಿಗೆ ಹೋಗುತ್ತಿದ್ದ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ರಭಸಕ್ಕೆ ಬೊಲೆರೊ ವಾಹನ ಅಪ್ಪಚ್ಚಿಯಾಗಿದ್ದು, ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Advertisement