

ಹಾಸನ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ವಿದ್ಯುತ್ ಬಾಕಿ ಹಣದ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಯೋಜನೆಗೆ ವಿದ್ಯುತ್ ಒದಗಿಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕಾಂ)ಗೆ ರೂ. 232.11 ಕೋಟಿ ಪಾವತಿ ಬಾಕಿ ಬರಬೇಕಿದ್ದು, ಸಂಕಷ್ಟ ಎದುರಿಸುವಂತಾಗಿದೆ.
ಯತ್ತಿನಹೊಳೆ ಯೋಜನೆ ರಾಜ್ಯದ ಅತ್ಯಂತ ದೊಡ್ಡ ಕುಡಿಯುವ ನೀರಿನ ಯೋಜನೆಗಳಲ್ಲಿ ಒಂದಾಗಿದ್ದು, ಏಳು ಜಿಲ್ಲೆಗಳ 47 ತಾಲೂಕುಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿ ಹಲವಾರು ಹಂತಗಳಲ್ಲಿ ನೀರನ್ನು ಎತ್ತುವ (ಪಂಪಿಂಗ್) ಕೇಂದ್ರಗಳನ್ನು ನಿರ್ಮಿಸಲಾಗಿದೆ.
ಹಾನುಬಾಳ್ಳು, ದೊಡ್ಡನಗರ, ಕುಂಬಾರಡಿ, ಕಾಡುಗರಹಳ್ಳಿ, ಎತ್ತಿನಹೊಳೆ 1 ಮತ್ತು 2 ಕೇಂದ್ರಗಳು ಪ್ರಮುಖವಾಗಿದ್ದು, ಈ ಎಲ್ಲಾ ಘಟಕಗಳ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿದೆ. ಆದರೆ ಇವುಗಳ ವಿದ್ಯುತ್ ಬಿಲ್‌ಗಳು ಹಲವು ತಿಂಗಳುಗಳಿಂದ ಪಾವತಿಯಾಗದೇ ಬಾಕಿ ಉಳಿದಿದೆ.
ಇತ್ತೀಚೆಗೆ ಸೆಸ್ಕಾಂ ಇಂಜಿನಿಯರ್‌ಗಳು ವಿವಿಧ ಯೋಜನೆಗಳ ಬಾಕಿ ವಿದ್ಯುತ್ ಬಿಲ್‌ಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ, ರಾಜ್ಯ ಇಂಧನ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಎತ್ತಿನಹೊಳೆ ಯೋಜನೆಯ ಬಾಕಿ ಮೊತ್ತವೇ ಹೆಚ್ಚು ಉಳಿದಿದೆ ಎಂಬುದು ಗಮನಾರ್ಹ ವಿಚಾರವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಸೆಪ್ಟೆಂಬರ್ 6ರಂದು ಈ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದ್ದರು. ಆದರೆ ಉದ್ಘಾಟನೆಯ ಬಳಿಕವೂ ಯೋಜನೆಯ ಹಣಕಾಸು ನಿರ್ವಹಣೆ ಪ್ರಶ್ನಾರ್ಥಕವಾಗಿದೆ. ತಿಂಗಳಿಗೆ ಸರಾಸರಿ ರೂ. 8 ಕೋಟಿ ವಿದ್ಯುತ್ ವೆಚ್ಚವಾಗುತ್ತಿರುವುದರಿಂದ, ಬಾಕಿ ಮೊತ್ತ ವೇಗವಾಗಿ ಏರಿಕೆಯಾಗುತ್ತಿದೆ.
ಇದೇ ವೇಳೆ ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಇರುವ ಏತ ನೀರಾವರಿ ಯೋಜನೆಗಳು, ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳ ಬೀದಿ ದೀಪಗಳು ಹಾಗೂ ಕುಡಿಯುವ ನೀರಿನ ಯೋಜನೆಗಳ ವಿದ್ಯುತ್ ಬಾಕಿಯೂ ಸೆಸ್ಕಾಂಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಎಲ್ಲಾ ಬಾಕಿ ಮೊತ್ತಗಳು ಸೇರಿ ಸಂಸ್ಥೆಯ ಆರ್ಥಿಕ ಸ್ಥಿತಿಗೆ ಹೊಡೆತ ನೀಡುತ್ತಿವೆ.
ಸೆಸ್ಕಾಂಗೆ ಅಧಿಕಾರಿಗಳು ಮಾತನಾಡಿ, ಸರ್ಕಾರದ ಯೋಜನೆಗಳಾಗಿರುವುದರಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಇದರಿಂದಾಗಿ ಬಾಕಿ ವಸೂಲಿ ಮಾಡುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
ಬಾಕಿದಾರರಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಗಮನಕ್ಕೂ ವಿಷಯ ತರಲಾಗಿದೆ ಎಂದು ತಿಳಿಸಿದ್ದಾರೆ.
ಸೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಪ್ಪ ಅವರು ಮಾತನಾಡಿ, “ವಿದ್ಯುತ್ ಕಡಿತ ಮಾಡುವ ಅಧಿಕಾರ ನಮಗೆ ಇಲ್ಲ. ಆದ್ದರಿಂದ ನೋಟಿಸ್ ನೀಡುವುದು ಮತ್ತು ಮೇಲ್ದರ್ಜೆಯ ಅಧಿಕಾರಿಗಳ ಗಮನಕ್ಕೆ ತರುವುದು ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ.
Advertisement