

ಬೆಂಗಳೂರು: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಘಟಕದಲ್ಲಿ ಬಹಿರಂಗಗೊಂಡಿದೆ ಎನ್ನಲಾದ ‘ಲವ್ ಜಿಹಾದ್’ ಪ್ರಕರಣ ಸಾಕಷ್ಟು ಸುದ್ದಿಯಾಗುತ್ತಿದ್ದು, ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಇಂತಹ ಜಾಲಗಳಿರುವ ಸಾಧ್ಯತೆಯನ್ನು ಪರಿಶೀಲಿಸಲು ವಿಶೇಷ ತನಿಖಾ ದಳ (SIT) ರಚನೆ ಮಾಡುವಂತೆ ಬಿಜೆಪಿ ಆಗ್ರಹಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು. ಈ ಪ್ರಕರಣ ಗಂಭೀರವಾಗಿದ್ದು, ಕರ್ನಾಟಕದಲ್ಲಿಯೂ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ವಿಶೇಷವಾಗಿ TCS ಸೇರಿದಂತೆ ಐಟಿ ಕಂಪನಿಗಳಲ್ಲಿ ಕೆಲಸಕ್ಕೆ ಬರುವ ಮಹಿಳೆಯರು ಇಂತಹ ಸಂಘಟಿತ ಜಾಲಗಳ ಗುರಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಉದ್ಯೋಗಕ್ಕಾಗಿ ಬರುವ ಮಹಿಳೆಯರು ದುರ್ಬಲ ಸ್ಥಿತಿಯಲ್ಲಿ ಇರಬಹುದು. ಇಂತಹ ಸಂದರ್ಭಗಳಲ್ಲಿ ದುರುಪಯೋಗವಾಗುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದ್ದರಿಂದ ಸಮಗ್ರ ತನಿಖೆ ಅಗತ್ಯ ಎಂದು ಹೇಳಿದರು.
ಇದನ್ನು ವೈಯಕ್ತಿಕ ಪ್ರಕರಣವಾಗಿ ಮಾತ್ರ ನೋಡುವುದಕ್ಕೆ ಸಾಧ್ಯವಿಲ್ಲ, ಇದು ತರಬೇತಿ, ಹಣಕಾಸು ನೆರವು ಮತ್ತು ಬಲವಂತದ ಮತಾಂತರ ಒಳಗೊಂಡ ಸಂಘಟಿತ ಜಾಲವಾಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದರು. “ಇದನ್ನು ಸಂಪೂರ್ಣವಾಗಿ ಪತ್ತೆಹಚ್ಚಲು ನ್ಯಾಯಾಧೀಶರ ನೇತೃತ್ವದ SIT ಅಗತ್ಯವಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರು ದಿನ-ರಾತ್ರಿ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಭದ್ರತೆ ಅತ್ಯಂತ ಮುಖ್ಯವಾಗಿದ್ದು, ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Advertisement