

ಬೆಂಗಳೂರು: ಬಿಟ್‌ಕಾಯಿನ್ ಅಕ್ರಮ ವಹಿವಾಟು ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಉರುಫ್ ಶ್ರೀಕಿ ಜತೆ ಹಣಕಾಸು ವಹಿವಾಟು ನಡೆಸಿರುವ ಸಂಬಂಧ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರ ಇಬ್ಬರು ಪುತ್ರರು ಮತ್ತು ಇತರರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ನಡೆಸಿದೆ.
ಸೋಮವಾರ ಬೆಳಿಗ್ಗೆ 6.30ರ ವೇಳೆಗೆ ಇ.ಡಿ ಬೆಂಗಳೂರು ವಲಯದ 100ಕ್ಕೂ ಹೆಚ್ಚು ಸಿಬ್ಬಂದಿ ಶಾಸಕ ಮತ್ತು ನಲಪಾಡ್ ಅವರ ತಂದೆ ಎನ್.ಎ.ಹ್ಯಾರಿಸ್ ಅವರ ಶಾಂತಿನಗರದ ನಿವಾಸವೂ ಸೇರಿ ಒಟ್ಟು 17 ಕಡೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಗರುಡಾ ಮಾಲ್ ಹಿಂಭಾಗದಲ್ಲಿರುವ ಹ್ಯಾರಿಸ್ ಮನೆಯ ಮೇಲೆ ಇಡಿ ದಾಳಿ ನಡೆದಿದೆ. ಇದೇ ಸಂದರ್ಭದಲ್ಲಿ ಹ್ಯಾರಿಸ್ ಪುತ್ರ ಮುಹಮ್ಮದ್ ನಲಪಾಡ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಕೇಂದ್ರದ ಭದ್ರತಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿಟ್‌ಕಾಯಿನ್ ಪ್ರಕರಣ ಪತ್ತೆಯಾಗುವುದಕ್ಕೂ ಮೊದಲ ಆರು ವರ್ಷಗಳ ಅವಧಿಯಲ್ಲಿ ನಲಪಾಡ್ ಮತ್ತು ಶ್ರೀಕಿ ಮಧ್ಯೆ ನಿರಂತರ ಹಣಕಾಸು ವ್ಯವಹಾರ ನಡೆದಿದೆ. ಈ ಅವಧಿಯಲ್ಲಿ ಒಟ್ಟು ₹4.65 ಕೋಟಿ ಹಣ ಕೈಬದಲಾಗಿದೆ. ಬಿಟ್‌ಕಾಯಿನ್ ವಹಿವಾಟಗೂ ಇದಕ್ಕೂ ಸಂಬಂಧವಿದೆಯೇ ಅಥವಾ ಇದು ಬೇರೆ ಅಕ್ರಮ ವಹಿವಾಟೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ
ಶಾಸಕ ಹ್ಯಾರಿಸ್ ಪುತ್ರರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತು ಒಮರ್ ಫಾರೂಕ್ ನಲಪಾಡ್ ಮತ್ತು ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಎಂಬ ಕ್ರಿಪ್ಟೋ ಹ್ಯಾಕರ್ ಅವರ ನಿವಾಸಗಳು ಸೇರಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಡಿ ಅಧಿಕಾರಿಗಳು ಸದ್ಯ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಬಿಟ್ ಕಾಯಿನ್ ಹಗರಣದ ಆರೋಪಿಗಳ ಜೊತೆಗೆ ಯಾವ ರೀತಿಯಲ್ಲಿ ಆರ್ಥಿಕ ವ್ಯವಹಾರ ನಡೆಸಲಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಎ ಹ್ಯಾರಿಸ್ ಮತ್ತು ಮುಹಮ್ಮದ್ ನಲಪಾಡ್ ಅವರಿಂದಲೂ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ. .
Advertisement