

ವಿಜಯಪುರ: ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಕೊಡಿಸುವ ಸ್ಪರ್ಧೆ ರಾಜ್ಯದ ರಾಜಕೀಯ ನಾಯಕರಲ್ಲಿ ನಡೆಯುತ್ತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರಿಂದ ಇಲ್ಲಿಯವರೆಗೂ ಸುಮಾರು 2,39,166 ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ. ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸುಮಾರು 56,814 ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಸದ್ಯ ಮೀಸಲಾತಿ ಹೆಚ್ಚಳಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ಇದೆ. ಈ ತಡೆಯಾಜ್ಞೆ ತೆರವುಗೊಳಿಸಲು ರಾಜ್ಯ ಸರ್ಕಾರ ಕೂಡಲೇ ಅರ್ಜಿ ಸಲ್ಲಿಸಬೇಕು. ತಡೆಯಾಜ್ಞೆ ತೆರವು ಆಗದಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ (ಎಸ್.ಎಲ್.ಪಿ) ಸಲ್ಲಿಸಿ ನಮಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು, ಒಂದು ವೇಳೆ ಮಾಡದಿದ್ದರೆ ಇದರ ಪರಿಣಾಮ ಎಲ್ಲ ರಾಜಕೀಯ ನಾಯಕರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೀಸಲಾತಿ ಪ್ರಮಾಣ ಜಾಸ್ತಿ ಮಾಡಿ 2023ರಲ್ಲಿಯೇ ಕಳುಹಿಸಿಕೊಟ್ಟರು ಕೇಂದ್ರ ಸರ್ಕಾರ ಇದುವರೆಗೂ ತೀರ್ಮಾನ ತೆಗೆದುಕೊಂಡಿಲ್ಲ. ಸಂಸದರಾದ ರಮೇಶ ಜಿಗಜಿಣಗಿ, ಪ್ರಹ್ಲಾದ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಏನು ಮಾಡುತ್ತಿದ್ದೀರಿ? ಅನ್ಯಾಯವಾದಾಗಲೂ ಮಾತನಾಡಲಾಗುವುದಿಲ್ಲವೇ' ಎಂದು ತರಾಟೆಗೆ ತೆಗೆದುಕೊಂಡ
ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ಪ್ರಯತ್ನಿಸಬೇಕು. ಜೂನ್ ವೇಳೆಗೆ ರಾಜ್ಯ ಸರ್ಕಾರ ನಿಯೋಗ ತೆರಳದಿದ್ದರೆ ರಾಜ್ಯವ್ಯಾಪಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.
ಮುಖ್ಯಮಂತ್ರಿ ನಿಯೋಗ ಕರೆದುಕೊಂಡು ಹೋಗುವ ವಿಚಾರದಲ್ಲಿ ಎಸ್ ಅಥವಾ ನೋ ಎಂಬುದನ್ನಷ್ಟೇ ಹೇಳಲಿ. ವಿನಾಕಾರಣ ಮುಂದೂಡುವುದನ್ನು ಸಹಿಸುವುದಿಲ್ಲ. ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡರೆ ಹೋರಾಟದ ಮೂಲಕ ಉತ್ತರ ನೀಡುತ್ತೇವೆ . ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್ಟಿ ಸಮುದಾಯಕ್ಕೆ ಶೇ.3ರಿಂದ 7 ಮತ್ತು ಎಸ್ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಒಟ್ಟಾರೆಯಾಗಿ ಶೇ.50 ಇದ್ದ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಳ ಮಾಡಿದರು.
ಆದರೆ, ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನು ಅನುಸರಿಸಲಿಲ್ಲ. ಅವರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಶೇ.56 ಮೀಸಲಾತಿಯನ್ನು ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಿ, ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸಲು ಮುತುವರ್ಜಿ ವಹಿಸಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಹ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬರೀ ಮುಂದೂಡುವ ಕೆಲಸವಷ್ಟೇ ಆಯಿತು ಎಂದು ಬೇಸರ ವ್ಯಕ್ತಪಡಿಸಿದರು.
Advertisement