

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ 42 ವರ್ಷದ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಗ್ರಾಮ ಪಂಚಾಯತಿ ಮಾಜಿ ಸದಸ್ಯ ರಾಜು ಖರಿ(48) ಅವರ ಥಾರ್ ಜೀಪ್ಗೆ ಟ್ರಕ್ ಡಿಕ್ಕಿ ಹೊಡೆಸಿ ಸಿನಿಮಾ ಸ್ಟೈಲ್ ನಲ್ಲಿ ಹತ್ಯೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರು ಜನರನ್ನು ಬಂಧಿಸಿದ್ದಾರೆ.
ಏಪ್ರಿಲ್ 14 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುಗದಡ್ಡಿ ಗ್ರಾಮದ ನಿವಾಸಿ ರಾಜು ಬಾಪು ಖರಿ ಅವರು ತಮ್ಮ ಜೀಪಿನಲ್ಲಿ ವಿಜಯಪುರ ನಗರದ ಕಡೆಗೆ ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆಸಲಾಗಿತ್ತು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆ ಎಂದು ಶುಕ್ರವಾರ ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ತಮ್ಮ ತೋಟದ ಮನೆಯಿಂದ ವಿಜಯಪುರದತ್ತ ಪ್ರಯಾಣ ಮಾಡುತ್ತಿದ್ದ ರಾಜು ಅವರ ಥಾರ್ ಜೀಪ್ಗೆ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ಬಳಿ ಟಿಪ್ಪರ್ ಡಿಕ್ಕಿ ಹೊಡೆಸಲಾಗಿದೆ. ಅಪಘಾತದ ತೀವ್ರತೆಗೆ ಥಾರ್ ಜೀಪ್ ಮುಂಭಾಗ ಜಖಂ ಆಗಿದೆ. ಆದರೆ ರಾಜು ಮೃತಪಟ್ಟಿರಲಿಲ್ಲ. ಹೀಗಾಗಿ ಜೀಪ್ ಬಳಿ ಆಗಮಿಸಿದ್ದ ಹಂತಕರು ಜೀಪ್ ಡೋರ್ನ ದೊಡ್ಡ ಕಲ್ಲಿನಿಂದ ಜಜ್ಜಿ ಒಡೆದು, ರಾಜು ತಲೆ ಮತ್ತು ಎದೆ ಭಾಗಕ್ಕೆ 6 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಕಂಟ್ರಿ ಪಿಸ್ತೂಲ್ನಿಂದ ಆರೋಪಿಗಳು ಮಾಡಿದ್ದ ಈ ಫೈರಿಂಗ್ಗೆ ರಾಜು ಉಸಿರು ಚೆಲ್ಲಿದ್ದರು.
ಘಟನೆಯ ನಂತರ, ಮೃತನ ಸಹೋದರನ ದೂರಿನ ಆಧಾರದ ಮೇಲೆ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ, ಮಾರಕ ಆಯುಧಗಳೊಂದಿಗೆ ಗಲಭೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸರು ಎರಡು ತಂಡಗಳನ್ನು ರಚಿಸಿ, ಹಂತಕರ ಬೆನ್ನುಬಿದ್ದಿದ್ದರು. ಅಂತಿಮವಾಗಿ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
ಬಂಧಿತ ಆರೋಪಿಗಳನ್ನು ಅಬುಶ್ಯಾ ಕೊಡ್ಲೇಕರ್(36), ಅಬಾಶ್ಯಾ ಮಾನೆ(35), ವಾಗೀಶ್(31), ಜಲಿಂದರ್ (29), ಅಜಿತ್ (29), ಮತ್ತು ಮುರಗು(24) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಪ್ರಮುಖ ಆರೋಪಿ ಅಬುಶ್ಯಾ ಮತ್ತು ಮೃತ ರಾಜು ನಡುವಿನ ಆಸ್ತಿ ವಿವಾದವೇ ಕೊಲೆಗೆ ಸಂಚು ರೂಪಿಸಲು ಕಾರಣವಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಕೊಲೆಗೆ ಕೇವಲ ಎರಡು ದಿನಗಳ ಮೊದಲು ಆರೋಪಿಗಳು ಪಿತೂರಿ ನಡೆಸಿ ಟಿಪ್ಪರ್ ಟ್ರಕ್ ಖರೀದಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
Advertisement