

ತುಮಕೂರು: ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 24ನೇ ರಾಷ್ಟ್ರೀಯ ಜೂನಿಯರ್ (U-20) ಅಥ್ಲೆಟಿಕ್ಸ್ ಫೆಡರೇಶನ್ ಸ್ಪರ್ಧೆ 2026 ರಲ್ಲಿ ಡೋಪಿಂಗ್ ಶಂಕೆ ತಲೆದೋರಿದ್ದು, ಕ್ರೀಡಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕ್ರೀಡಾಂಗಣದ ಶೌಚಾಲಯದಲ್ಲಿ ಬಳಸಿದ ಸಿರಿಂಜ್‌ಗಳು ಮತ್ತು ಸೂಜಿಗಳು ಪತ್ತೆಯಾಗಿರುವುದು ಈ ಅನುಮಾನಗಳು ಬಲಗೊಳ್ಳುವಂತೆ ಮಾಡಿದೆ.
ಮಾಹಿತಿಯ ಪ್ರಕಾರ, ಶೌಚಾಲಯದಲ್ಲಿ 4ರಿಂದ 5 ಬಳಸಿದ ಸಿರಿಂಜ್‌ಗಳು ಪತ್ತೆಯಾಗಿದ್ದು, ಕೆಲವು ಅಥ್ಲೀಟ್‌ಗಳು ಪ್ರದರ್ಶನ ಹೆಚ್ಚಿಸಲು ನಿಷೇಧಿತ ಔಷಧಗಳನ್ನು ಬಳಸಿರುವ ಸಾಧ್ಯತೆ ಬಗ್ಗೆ ಶಂಕೆಗಳು ವ್ಯಕ್ತವಾಗುತ್ತಿವೆ.
ದೇಶದ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಯುವ ಅಥ್ಲೀಟ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯಾಗಿರುವುದರಿಂದ ಮಹತ್ವ ಹೆಚ್ಚಾಗಿದೆ.
ಸ್ಪರ್ಧೆಯ ನಿರ್ದೇಶಕ ಸತ್ಯನಾರಾಯಣ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಸಿರಿಂಜ್ ಪತ್ತೆಯಾದ ವಿಚಾರವನ್ನು ಖಚಿತಪಡಿಸಿದ್ದಾರೆ. ಇದೇ ವೇಲೆ ಡೋಪಿಂಗ್ ಶಂಕೆ ಇರುವುದನ್ನೂ ಒಪ್ಪಿಕೊಂಡಿದ್ದಾರೆ. ಆದರೆ ಇದರಲ್ಲಿ ಭಾಗಿಯಾಗಿರುವ ನಿರ್ದಿಷ್ಟ ಅಥ್ಲೀಟ್‌ಗಳ ಗುರುತು ಇನ್ನು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (ನಾಡಾ) ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಕ್ರೀಡಾಪಟುಗಳ ಮೇಲೆ ಕಟ್ಟುನಿಟ್ಟಿನ ಡೋಪಿಂಗ್ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ವಿಶೇಷವಾಗಿ ಪದಕ ವಿಜೇತರು ಮತ್ತು ಅಂತಿಮ ಸುತ್ತು ತಲುಪಿದ ಅಥ್ಲೀಟ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಿಷೇಧಿತ ಪದಾರ್ಥ ಬಳಕೆ ದೃಢಪಟ್ಟರೆ ಸಂಬಂಧಿಸಿದ ಕ್ರೀಡಾಪಟುಗಳಿಗೆ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಈ ಸ್ಪರ್ಧೆ ಮುಂದಿನ ದಿನಗಳಲ್ಲಿ ಹಾಂಗ್ ಕಾಂಗ್‌ನಲ್ಲಿ ನಡೆಯಲಿರುವ ಏಷ್ಯನ್ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಹಾಗೂ ಅಮೆರಿಕದ ಯೂಜಿನ್ ನಗರದಲ್ಲಿನ ವರ್ಲ್ಡ್ ಅಥ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್‌ಗೆ ಅರ್ಹತಾ ಸ್ಪರ್ಧೆಯಾಗಿರುವುದರಿಂದ, ಡೋಪಿಂಗ್ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ.
ಜಿಲ್ಲಾ ಆಡಳಿತ ಹಾಗೂ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಜಂಟಿಯಾಗಿ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ಇದೀಗ ಈ ಬೆಳವಣಿಗೆ ಸ್ಪರ್ಧೆಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಮೂಡುವಂತೆ ಮಾಡಿದೆ.
ಕ್ರೀಡಾ ನೀತಿಗಳ ಉಲ್ಲಂಘನೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ತನಿಖೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
Advertisement