SSLC ಪರೀಕ್ಷೆಯಲ್ಲಿ 'ಮಾಸ್ ಕಾಪಿ' ಆರೋಪ: ವಯಸ್ಸಾಗಿದೆ-ಏನೇನೋ ಬಡಬಡಿಸುತ್ತಾರೆ, ಕ್ಷಮಿಸಿಬಿಡೋಣ; ಹೆಚ್.ವಿಶ್ವನಾಥ್ ವಿರುದ್ಧ ಮಧು ಬಂಗಾರಪ್ಪ ಆಕ್ರೋಶ

ಪರೀಕ್ಷಾ ಕೇಂದ್ರದಲ್ಲಿ ವೆಬ್‌ಕ್ಯಾಸ್ಟಿಂಗ್‌ ಸ್ಥಗಿತಗೊಳಿಸಿ ಕಾಪಿ ಹೊಡೆಸುವ ಮೂಲಕ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ದಾಖಲೆಯ ಫಲಿತಾಂಶ ಪಡೆಯಲಾಗಿದೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಆರೋಪಿಸಿದ್ದಾರೆ.
Madhu Bangarappa and H. Vishwanath
ಮಧು ಬಂಗಾರಪ್ಪ ಹಾಗೂ ಹೆಚ್.ವಿಶ್ವನಾಥ್
Updated on

ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆಯ ಅತ್ಯುತ್ತಮ ಫಲಿತಾಂಶ ಬಂದಿರುವುದಕ್ಕೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು ನೀಡಿರುವ ಹೇಳಿಕೆ ಇದೀಗ ತೀವ್ರ ಟೀಕೆಗೆ ಗ್ರಾಸವಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ವೆಬ್‌ಕ್ಯಾಸ್ಟಿಂಗ್‌ ಸ್ಥಗಿತಗೊಳಿಸಿ ಕಾಪಿ ಹೊಡೆಸುವ ಮೂಲಕ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ದಾಖಲೆಯ ಫಲಿತಾಂಶ ಪಡೆಯಲಾಗಿದೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಆರೋಪಿಸಿದ್ದಾರೆ.

ಈ ಹೇಳಿಕೆ ಹೇಳಿಕೆ ನಾಡಿನ ಮಕ್ಕಳು ಶೈಕ್ಷಣಿಕ ಸಾಧನೆ ಕುರಿತು ಮಾಡಿರುವ ಉದ್ದೇಶಪೂರ್ವಕ ಅಪಮಾನ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕಿಡಿಕಾರಿದ್ದಾರೆ.

‘ಎಚ್‌.ವಿಶ್ವನಾಥ್ ಅವರಿಗೆ ವಯಸ್ಸಾಗಿದೆ. ಅವರು ಮಕ್ಕಳು ಇದ್ದಂತೆ. ಹೀಗಾಗಿ ಏನೇನೊ ಬಡಬಡಿಸುತ್ತಾರೆ. ಅದನ್ನು ಅರಳುಮರಳು ಎಂದು ಹೇಳಲಾಗುವುದಿಲ್ಲ. ಅವರ ವಯಸ್ಸಿಗೆ ಬೆಲೆ ಕೊಟ್ಟು ಕ್ಷಮಿಸಿ ಬಿಡೋಣ’ ಎಂದು ಹೇಳಿದ್ದಾರೆ.

ಇಡೀ ದೇಶದಲ್ಲಿ ಮೊದಲ ಬಾರಿಗೆ ಪರೀಕ್ಷಾ ಕೋಠಡಿಯಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದೇ ಮಧು ಬಂಗಾರಪ್ಪ. ಹಾಗಿದ್ದ ಮೇಲೆ ಕ್ಯಾಮೆರಾ ಹಾಕಿ ಕಾಪಿ ಹೊಡೆಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

‘ಪರೀಕ್ಷಾ ಕೊಠಡಿಯಲ್ಲಿ ವೆಬ್‌ಕ್ಯಾಸ್ಟಿಂಗ್ ಕರ್ನಾಟಕದ್ದು ಮಾದರಿ ವ್ಯವಸ್ಥೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕೂಡ ನಮ್ಮ ಬಳಿಯೇ ವರದಿ ಪಡೆದು ವೆಬ್‌ಕ್ಯಾಸ್ಟಿಂಗ್ ಹಾಗೂ ಎರಡು ಬಾರಿ ಪರೀಕ್ಷೆ ನಡೆಸುವ ವ್ಯವಸ್ಥೆ ಅಳವಡಿಸಿಕೊಂಡಿದೆ’ ಎಂದು ಹೇಳಿದರು.

‘ಎಚ್‌.ವಿಶ್ವನಾಥ್ ನನ್ನ ಶಿಕ್ಷಣದ ಪ್ರಮಾಣಪತ್ರ ಕೇಳಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎಲ್ಲಿಯೂ ಸಲ್ಲದೇ ದಿಕ್ಕು ದೆಸೆ ಇಲ್ಲದಂತಾಗಿರುವ ವಿಶ್ವನಾಥ್ ಅವರಿಗೆ ನಾನೇ ಸರ್ಟಿಫಿಕೇಟ್ ಕಳಿಸಿಕೊಡುವೆ’ ಎಂದು ಟಾಂಗ್ ಕೊಟ್ಟರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿರುದ್ಧವೂ ತೀವ್ರವಾಗಿ ಕಿಡಿಕಾರಿದರು. ಬೊಮ್ಮಾಯಿ ಅವರು ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದವರು. ಅವರು ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆ ಅಂಕವನ್ನು 35 ರಿಂದ 33 ಕ್ಕೆ ಇಳಿಸಿದ್ದನ್ನು ಟೀಕಿಸಿದ್ದಾರೆ. ಆದರೆ, ಅವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಯನ್ನು ಇಲ್ಲಿ ಅಳವಡಿಸಿದ್ದೇವೆ, ಈ ಕನಿಷ್ಠ ವಿಚಾರ ಅವರಿಗೆ ತಿಳಿದಿಲ್ಲ ಎಂದು ಟೀಕಿಸಿದರು.

ಈ ಬಾರಿ ಶೇಕಡಾ 33ರಷ್ಟು ಅಂಕಗಳಿಸಿ ತೇರ್ಗಡೆಯಾದ ಮಕ್ಕಳ ಸಂಖ್ಯೆ 0.14 ರಷ್ಟು ಮಾತ್ರ. ಆದರೆ, ಕೇರಳದಲ್ಲಿ 30 ಅಂಕ ಪಡೆದರೆ ತೇರ್ಗಡೆಯಾಗುತ್ತಾರೆ. ಇದು ಅವರಿಗೆ ಗೊತ್ತಿಲ್ಲವೇ ಎಂದು ವ್ಯಂಗ್ಯವಾಡಿದರು.

ಬೊಮ್ಮಾಯಿ ಅವರು ನಾಡಿನ ಮಕ್ಕಳ ಸಾಧನೆಯನ್ನು ಅಪಮಾನಿಸುತ್ತಿದ್ದಾರೆ, ಅವರಿಗೆ ಮಕ್ಕಳ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿಯ ಕೊರತೆಯಿಂದ ಈ ರೀತಿ ಮಕ್ಕಳ ಫಲಿತಾಂಶವನ್ನು ಅನುಮಾನ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಹೇಳಿದರು.

Madhu Bangarappa and H. Vishwanath
'ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, ಹೀಗಿದ್ದರೂ ಶೇ.94ರಷ್ಟು ಫಲಿತಾಂಶ ಹೇಗೆ ಬಂತು?': MLC ಹೆಚ್.ವಿಶ್ವನಾಥ್

ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ.

ಎಲ್ಲಾ ಇಲಾಖೆಗಳಿಗಿಂತಲೂ ಹೆಚ್ಚು ಹುದ್ದೆಗಳ ನೇಮಕಾತಿ ಶಿಕ್ಷಣ ಇಲಾಖೆಯಲ್ಲೇ ನಡೆಯಬೇಕಿದೆ. ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಕುರಿತು ನಿರ್ಧಾರ ತೆಗೆದುಕೊಂಡಿದ್ದೇವೆ. ಅದರ ಆಧಾರದ ಮೇಲೆ ಶೀಘ್ರದಲ್ಲೇ ಸಿಇಟಿ ಪರೀಕ್ಷೆ ನಡೆಸಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದರು.

ಖಾಸಗಿ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 5800 ಹುದ್ದೆಗಳಿಗೂ ನೇಮಕಾತಿ ನಡೆಸಲು ಅನುಮತಿ ನೀಡಲಾಗುವುದು. ಇದರಿಂದ ಕನ್ನಡ ಮಾಧ್ಯಮದ ಶಾಲೆಗಳನ್ನು ಬಲವರ್ಧನೆಗೊಳಿಸಿದಂತಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ನಿರಾಶೆ ಮಾಡುವುದಿಲ್ಲ. ಆದಷ್ಟು ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು. ಇಲಾಖೆಗೂ ಶಿಕ್ಷಕರ ಅಗತ್ಯ ಇದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com