ಕರ್ನಾಟಕದಲ್ಲಿ ರಣ ಬಿಸಿಲು: ಚಿಂತಾಕಿಯಲ್ಲಿ 46 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ..!

ಸೋಮವಾರ ದಾಖಲಾಗಿದ್ದ ಈ ಗರಿಷ್ಠ ತಾಪಮಾನ ಮಂಗಳವಾರವೂ ಮುಂದುವರಿದಿದ್ದು, ಬಿಸಿಲಿನ ತೀವ್ರತೆ ಬಗ್ಗೆ ಆತಂಕ ಹೆಚ್ಚಾಗುತ್ತಿದೆ.
File photo
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಉರಿ ಬಿಸಿಲಿಗೆ ಜನತೆ ಕಂಗಾಲಾಗಿದ್ದಾರೆ. ಈ ನಡುವೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಚಿಂತಾಕಿ ಪ್ರದೇಶದಲ್ಲಿ 46 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಪ್ರಕಾರ, ಇದು ರಾಜ್ಯದಲ್ಲಿ ಇದೂವರೆಗೆ ದಾಖಲಾದ ಅತ್ಯಧಿಕ ತಾಪಮಾನವಾಗಿದೆ ಎಂದು ಹೇಳಿದೆ.

ಸೋಮವಾರ ದಾಖಲಾಗಿದ್ದ ಈ ಗರಿಷ್ಠ ತಾಪಮಾನ ಮಂಗಳವಾರವೂ ಮುಂದುವರಿದಿದ್ದು, ಬಿಸಿಲಿನ ತೀವ್ರತೆ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಇದೇ ವೇಳೆ ರಾಯಚೂರಿನ ಲಿಂಗಸುಗೂರು 44 ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ನಗರದಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಗರಿಷ್ಠ ತಾಪಮಾನ ಏರಿಕೆಯಾಗುವುದು ಮಾತ್ರವಲ್ಲ, ಅದು ಎಷ್ಟು ಹೊತ್ತು ಮುಂದುವರಿಯುತ್ತದೆ ಎಂಬುದೇ ಆತಂಕದ ವಿಚಾರವಾಗಿದೆ. ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಧ್ಯಾಹ್ನ 2.15ರ ಸುಮಾರಿಗೆ ತಾಪಮಾನ ಗರಿಷ್ಠ ಮಟ್ಟ ತಲುಪಿದ್ದು, ನಂತರ ಸ್ವಲ್ಪ ಇಳಿಕೆಯಾದರೂ, ಏಳು ಗಂಟೆಗಳಿಗೂ ಹೆಚ್ಚು ಕಾಲ 40 ಡಿಗ್ರಿಗಿಂತ ಮೇಲೆಯೇ ಉಳಿದಿದೆ. ಈ ದೀರ್ಘಕಾಲದ ಬಿಸಿಲು ಮಾನವ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

File photo
ಬೆಂಗಳೂರಲ್ಲಿ ರಣ ಬಿಸಿಲು: KIAಯಲ್ಲಿ 38 ಡಿಗ್ರಿ ತಲುಪಿದ ತಾಪಮಾನ; 2 ದಿನಗಳಲ್ಲಿ ಮಳೆ ಸಾಧ್ಯತೆ

ಇದರ ಪರಿಣಾಮವಾಗಿ ರಾತ್ರಿ ವೇಳೆ ತಂಪಾದ ವಾತಾವರಣ ಮರೆಯಾಗಿದೆ, ಕನಿಷ್ಠ ತಾಪಮಾನವೂ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಳೆದ ಸುಮಾರು ಒಂದು ತಿಂಗಳಿನಿಂದ 24 ಡಿಗ್ರಿ ಸುತ್ತಮುತ್ತಲೇ ಉಳಿದಿದೆ. ರಾತ್ರಿ ವೇಳೆ ತಾಪಮಾನ ಕಡಿಮೆಯಾಗದಿರುವುದು ಜನರಲ್ಲಿ ನಿದ್ರೆ ಸಮಸ್ಯೆ, ದೇಹದ ದಣಿವು ಮತ್ತು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತಿದೆ.

ಉಷ್ಣತೆ ದೀರ್ಘಕಾಲ ಮುಂದುವರಿದರೆ ಅದು ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲಷ್ಟೇ ಅಲ್ಲ, ಕೃಷಿ ಮತ್ತು ನೀರಿನ ಸಂಪನ್ಮೂಲಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ತಾಪಮಾನ, ಅವಧಿ ಮತ್ತು ಅದರ ಪರಿಣಾಮಗಳ ನಡುವೆ ಸಂಬಂಧವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಜೊತೆಗೆ ಆರ್ದ್ರತೆ ಮಟ್ಟವನ್ನೂ ಗಮನಿಸಲಾಗುತ್ತಿದೆ.

2026 ವರ್ಷದ ಎಲ್‌ನಿನೋ ಪರಿಣಾಮದ ಅಂತ್ಯವಾಗುತ್ತಿರುವುದರಿಂದ, 2027ರಲ್ಲಿ ಉಷ್ಣತೆ ಇನ್ನೂ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಎಚ್ಚರಿಸಿದ್ದಾರೆ.

ಮಳೆಗಾಲದ ಮಳೆಯ ಆಗಮನದಲ್ಲಿ ವಿಳಂಬವಾಗಿರುವುದು ಮತ್ತು ಮಳೆಗಾಲದ ವ್ಯವಸ್ಥೆಗಳಲ್ಲಿನ ಬದಲಾವಣೆಗಳು ಬಿಸಿಲಿನ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಜಿಲ್ಲಾಡಳಿತಗಳಿಗೆ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ನಾಗರಿಕರೂ ಮಧ್ಯಾಹ್ನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು, ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com