

ಬೆಂಗಳೂರು: ನಗರದಲ್ಲಿ ನಿನ್ನೆ ಬುಧವಾರ ಸಂಭವಿಸಿದ ತೀವ್ರ ಗಾಳಿ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಅಮಾಯಕರು ಬಲಿಯಾದ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತವು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ.
ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ (Suo Motu Case) ಪ್ರಕರಣ ದಾಖಲಿಸುವುದಾಗಿ ಘೋಷಿಸಿದ್ದಾರೆ.
ಲೋಕಾಯುಕ್ತರು ಏನೆಂದರು?
ಇಂದು ಕಂಪೌಂಡ್ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಕಾಂಪೌಂಡ್‌ನ ಅಡಿಪಾಯ ಅತ್ಯಂತ ದುರ್ಬಲವಾಗಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ. ನಗರದಲ್ಲಿ ಪ್ರತಿ ವರ್ಷ ಮಳೆ ಬರುತ್ತದೆ ಎಂಬುದು ಗೊತ್ತಿದ್ದರೂ, ಇಂತಹ ದುರ್ಬಲ ಗೋಡೆಗಳ ಪಕ್ಕದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಿರುವುದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಕೇವಲ ಒಂದು ಗಂಟೆ ಮಳೆ ಬಂದಿದ್ದಕ್ಕೆ ಗೋಡೆ ಕುಸಿಯುತ್ತಿದೆ ಎಂದರೆ ಕಾಮಗಾರಿಯ ಗುಣಮಟ್ಟ ಎಷ್ಟಿರಬಹುದು ಯೋಚಿಸಿ ಎಂದರು.
ಈ ಪ್ರಕರಣದಲ್ಲಿ ಕೆಳಹಂತದ ಸಿಬ್ಬಂದಿಯನ್ನಷ್ಟೇ ಅಲ್ಲದೆ, ಉನ್ನತ ಮಟ್ಟದ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿ ಮಾಡಬೇಕು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಹಿರಿಯ ಅಧಿಕಾರಿಗಳ ವಿರುದ್ಧ ಕೇಸು ಸಾಧ್ಯತೆ
ಬೌರಿಂಗ್ ಪ್ರಕರಣದಲ್ಲಿ ಕೇವಲ ಕೆಳ ಹಂತದ ಅಧಿಕಾರಿಗಳ ಮೇಲೆ ಮಾತ್ರವಲ್ಲದೆ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ಕೂಡ ಕೇಸು ದಾಖಲಿಸುವ ಸಾಧ್ಯತೆಯಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ, ಅಪರ ಕಾರ್ಯದರ್ಶಿ, 5 ಪಾಲಿಕೆಗಳ ವಲಯ ಆಯುಕ್ತರ ವಿರುದ್ಧ ಕೂಡ ಕೇಸು ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
Advertisement