

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅನುಮತಿ ಇಲ್ಲದೇ ಎಲ್ಲೆಂದರಲ್ಲಿ ಕಸ ಸುರಿಯುವವರ ವಾಹನಗಳನ್ನು ಯಾವುದೇ ಮುಲಾಜಿಲ್ಲದೇ ಸೀಜ್ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶನಿವಾರ ನಗರದ ಪೊಲೀಸರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಇಂದು ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಬಳಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಸಿಎಂ ಡಿಕೆಶಿ, ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಬೆಂಗಳೂರು ನಿಮ್ಮ ಆಸ್ತಿ. ಇದನ್ನು ಕಾಪಾಡಲು ಅಭಿಯಾನ ಆರಂಭಿಸಿದ್ದೇವೆ ಎಂದರು.
ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವ ವಾಹನಗಳಿಗೆ ನೋಟೀಸ್ ಕೊಡಲಾಗಿತ್ತು. ಕ್ಯಾಮೆರಾ ಕಣ್ಗಾವಲು ಇಡಲಾಗಿತ್ತು. ಈಗ ಮತ್ತೆ ಯತಾಸ್ಥಿತಿಯಲ್ಲಿ ಕಸ ಸುರಿಯುತ್ತಿದ್ದಾರೆ. ಜನರಲ್ಲಿ ನಾವು ನಾಗರಿಕ ಪ್ರಜ್ಞೆ ತರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಅಭಿಯಾನದಡಿ ಕಟ್ಟಡ ನಿರ್ಮಾಣ ತ್ಯಾಜ್ಯ, ಘನ ತ್ಯಾಜ್ಯ, ಹಳೆಯ ವಿದ್ಯುತ್ ಕಂಬಗಳು, ಪೈಪ್‌ಗಳು, ಮಣ್ಣಿನ ಗುಡ್ಡೆಗಳು, ಬೆಳೆದು ನಿಂತ ಕಳೆಗಿಡಗಳು ಹಾಗೂ ಮರದ ಕೊಂಬೆಗಳು ಸೇರಿದಂತೆ ಒಟ್ಟು 22,372 ಟನ್‌ಗಳಷ್ಟು ತ್ಯಾಜ್ಯವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಈ ಅಭಿಯಾನದ ಮೂಲಕ ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಬೆಂಗಳೂರು ನಗರವನ್ನು ತ್ಯಾಜ್ಯ ಮುಕ್ತ ಹಾಗೂ ಮಾದರಿ ಮಹಾನಗರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದರು.
ಹಸಿರಿನ ವಿಚಾರವಾಗಿ ನನ್ನಲ್ಲಿ ವಿಭಿನ್ನ ಆಲೋಚನೆ ಇದೆ. ಅದನ್ನು ಈಗ ನಾನು ಪ್ರಸ್ತಾಪ ಮಾಡುವುದಿಲ್ಲ, 100 ದಿನಗಳ ಕಾರ್ಯಕ್ರಮದ ವೇಳೆ ಪ್ರಕಟ ಮಾಡುತ್ತೇವೆ. ಬೆಂಗಳೂರು ಸ್ವಚ್ಛತೆ ಬಗ್ಗೆ ಟೀಕೆ ಟಿಪ್ಪಣಿ ಬರುತ್ತಿವೆ. ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ಟೀಕೆಗಳು ಸಾಯುತ್ತವೆ ಎಂದರು.
ಇದೇ ವೇಳೆ ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ. ಯಾರಾದರೂ ಇದನ್ನು ಅಧಿಕಾರಿಗಳ ಮೇಲೆ ದಾಳಿ ಎಂದು ಭಾವಿಸಿದ್ದರೆ ಅದು ಭ್ರಮೆ. ಇದು ಸರ್ಕಾರ, ಸಚಿವರು ಹಾಗೂ ಶಾಸಕರ ಮೇಲಿನ ದಾಳಿ ಎಂದೇ ಭಾವಿಸುತ್ತೇವೆ. ನಾವು ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಈ ವೇಳೆ ಇಂಧನ ಸಚಿವರಾದ ಶ್ರೀ ಕೆ.ಜೆ ಜಾರ್ಜ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಶ್ರೀ ಎಸ್.ಆರ್ ವಿಶ್ವನಾಥ್ ಹಾಗೂ ಶ್ರೀ ಎ.ಸಿ ಶ್ರೀನಿವಾಸ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.