

ಮಂಡ್ಯ : ಕಾವೇರಿ ಜಲ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಹೋರಾಟ ತೀವ್ರಗೊಂಡಿದೆ. ಆಗಸ್ಟ್ 13 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ಕನ್ನಡ ಚಿತ್ರೋದ್ಯಮವೂ ಬೆಂಬಲ ವ್ಯಕ್ತಪಡಿಸಿದೆ. ಈ ಮಧ್ಯೆ ನಟಿ ರಾಗಿಣಿ ದ್ವಿವೇದಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರೈತರ ಹೋರಾಟಕ್ಕೆ ಸ್ಪಂದಿಸದ ರಾಗಿಣಿ, ನೀರಿನ ಬಗ್ಗೆ ನೋ ಕಾಮೆಂಟ್ಸ್ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.
ಹೌದು. ತಮ್ಮ ಸಿನಿಮಾ‘ಸರಕಾರಿ ನ್ಯಾಯ ಬೆಲೆ ಅಂಗಡಿ’ ಪ್ರಚಾರಕ್ಕಾಗಿ ಮಂಡ್ಯದ ಸಂಜಯ ಚಿತ್ರಮಂದಿರಕ್ಕೆ ರಾಗಿಣಿ ಅವರು ಕಾರಿನಲ್ಲಿ ಆಗಮಿಸಿದರು. ಆಗ ಕಾರಿನ ಬಳಿ ಹೋದ ರೈತ ಮುಖಂಡರು, ಕಾರಿನಿಂದ ಇಳಿದು ಕಾವೇರಿ ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ. ಆದರೆ, ಅವರು ಹೋರಾಟಕ್ಕೆ ಬಾರದೆ ನೇರವಾಗಿ ಚಿತ್ರಮಂದಿರದೊಳಗೆ ತೆರಳಿದ್ದಾರೆ. ಇದರಿಂದ ಸಿಡಿದೆದ್ದ ರೈತರು, ರೈತ ಮುಖಂಡರು ನಟಿ ರಾಗಿಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಡುತ್ತಿರುವ ವಿಚಾರಕ್ಕೆ ನಾನು ಫರ್ಸನಲ್ ಆಗಿ ಕಾಮೆಂಟ್ ಮಾಡಲು ಇಷ್ಟಪಡೋದಿಲ್ಲ. ಐ ಥಿಂಕ್ ನೀರು ಇರೋದು ಒಂದು ನ್ಯಾಚರಲ್ ರೀಸೋರ್ಚ್ ಅಂಡ್ ಶುಡ್ ಬಿ ಪ್ರತಿಯೊಬ್ಬರ ನೀರಿನ ಮೇಲೆ ಹಕ್ಕಿದೆ. ಕಾವೇರಿ ವಿವಾದದ ಬಗ್ಗೆ ಮಾತನಾಡುವ ನಾಲೆಡ್ಜ್ ನನಗಿಲ್ಲ. ಹೀಗಾಗಿ ಅದರ ಬಗ್ಗೆ ಏನನ್ನೂ ಕಾಮೆಂಟ್ ಮಾಡುವುದಿಲ್ಲ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ. ನಟಿಯ ಈ ನಡೆಯ ವಿರುದ್ಧ ರೈತರು ಕಿಡಿಕಾರುತ್ತಿದ್ದಾರೆ.
ಇನ್ನೂ ಸಿನಿಮಾ ಪ್ರಚಾರಕ್ಕಾಗಿ ಆಗಮಿಸಿದ್ದ ಮಾಜಿ ಸಚಿವ ನಟ ಕುಮಾರ್ ಬಂಗಾರಪ್ಪ, ಕಾವೇರಿ ಹೋರಾಟದಲ್ಲಿ ಭಾಗಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಎಸ್ ಬಂಗಾರಪ್ಪ ಅವರ ಶಿಷ್ಯವೆನ್ನುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಬಂಗಾರಪ್ಪ ಅವರಂತೆ ಸುಗ್ರೀವಾಜ್ಞೆ ತಂದು ತಮಿಳುನಾಡಿಗೆ ನೀರು ಬಿಡದಿರುವ ದಿಟ್ಟತನ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.
ಸದ್ಯಕ್ಕೆ ನಮಗೆ ನೀರು ಸಾಕಾಗುತ್ತಿಲ್ಲವೆಂದ ಮೇಲೆ ತಮಿಳುನಾಡಿಗೆ ಹೇಗೆ ನೀರು ಕೊಡುವುದು ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇವಲ ಬಾಯಿಮಾತಿಗೆ ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಶಿಷ್ಯ ಎಂದರೆ ಸಾಕಾಗುವುದಿಲ್ಲ. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ತೆಗೆದುಕೊಂಡ ನಿರ್ಣಯ ಪ್ರದರ್ಶಿಸಬೇಕು ಎಂದು ಪುನರುಚ್ಚಿಸಿದರು.