ಶಾಲೆಗಳ ಸುತ್ತಮುತ್ತ ಜಂಕ್‌ ಫುಡ್ ಗೆ ನಿಷೇಧ, ಪ್ರೊಟೀನ್ ಯುಕ್ತ ಆಹಾರ ಬಳಕೆಗೆ ಉತ್ತೇಜನ: ಆರೋಗ್ಯ ಸಚಿವ ಯು ಟಿ ಖಾದರ್-Video

ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವುದು ಹಾಗೂ ಜಂಕ್‌ ಫುಡ್ ಸೇವನೆ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತಡೆಗಟ್ಟುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.
Junk food
ಜಂಕ್ ಫುಡ್
Updated on

ಬೆಂಗಳೂರು: ಶಾಲಾ-ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳ 50 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಬ್ಬು, ಸಕ್ಕರೆ ಮತ್ತು ಉಪ್ಪು (HFSS) ಹೊಂದಿರುವ ಆಹಾರ ಪದಾರ್ಥಗಳ ಮಾರಾಟ, ಉಚಿತ ವಿತರಣೆ, ಜಾಹೀರಾತು ಮತ್ತು ಪ್ರಚಾರಕ್ಕೆ ವಿಧಿಸಿರುವ ನಿಷೇಧವನ್ನು ಇಂದು ಆಗಸ್ಟ್ 1ರಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆ ತಿಳಿಸಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಘೋಷಣೆ ಮಾಡಿದರು.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವುದು ಹಾಗೂ ಜಂಕ್‌ ಫುಡ್ ಸೇವನೆ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತಡೆಗಟ್ಟುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಯು ಟಿ ಖಾದರ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಶಾಲೆಯ ಮಕ್ಕಳಿಗೆ ಸುರಕ್ಷಿತ ಆಹಾರ ಮತ್ತು ಸಮತೋಲಿತ ಆಹಾರ) ನಿಯಮಾವಳಿ–2020 ಅನ್ವಯ ಶಾಲೆ ಹಾಗೂ ಕಾಲೇಜು ಆವರಣಗಳಲ್ಲಿ ಸುರಕ್ಷಿತ, ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನಷ್ಟೇ ಒದಗಿಸುವಂತೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Junk food
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಟಿಬದ್ಧ: ಶಾಲಾ ಆವರಣಗಳಲ್ಲಿ ಜಂಕ್ ಫುಡ್ ನಿಷೇಧಕ್ಕೆ ಸರ್ಕಾರ ಸಿದ್ಧ?

ಇಡ್ಲಿ, ಉಪ್ಪಿಟ್ಟು, ಅವಲಕ್ಕಿ, ಧೋಕ್ಲಾ, ಚೀಲಾ ಹಾಗೂ ಗಂಜಿಯಂತಹ ಸಾಂಪ್ರದಾಯಿಕ ಪೌಷ್ಟಿಕ ಆಹಾರಗಳನ್ನು ನೀಡುವಂತೆ ಶಿಫಾರಸು ಮಾಡಲಾಗಿದ್ದು, ಅಡುಗೆಯಲ್ಲಿ ಎಣ್ಣೆ ಮತ್ತು ತುಪ್ಪವನ್ನು ಮಿತವಾಗಿ ಬಳಸುವಂತೆ ಸೂಚಿಸಲಾಗಿದೆ.

ಶಿಕ್ಷಣ ಸಂಸ್ಥೆಗಳ ಆವರಣದೊಳಗೆ ಅಥವಾ 50 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕ್ಯಾಂಟೀನ್‌ಗಳು, ಬೇಕರಿಗಳು, ಹೊಟೇಲ್ ಹಾಗೂ ಆಹಾರ ಮಳಿಗೆಗಳು ಸೇರಿದಂತೆ ಎಲ್ಲ ಆಹಾರ ವ್ಯಾಪಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಅಗತ್ಯ ಪರವಾನಗಿ ಪಡೆಯಬೇಕು ಎಂದು ಸೂಚಿಸಲಾಗಿದೆ.

ನಿಯಮಗಳ ಅನುಷ್ಠಾನವನ್ನು ಪರಿಶೀಲಿಸಲು ಆಹಾರ ಸುರಕ್ಷತಾ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಲಿದ್ದಾರೆ. ಅಲ್ಲದೆ, ಶಿಕ್ಷಣ ಸಂಸ್ಥೆಗಳು ಎಚ್‌ಎಫ್‌ಎಸ್‌ಎಸ್ ಆಹಾರಗಳ ಮಾರಾಟ ನಿಷೇಧಿಸಿರುವ ಕುರಿತು ಪ್ರಮುಖ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸಬೇಕು. ನಿಯಮ ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ನಿಯಮಾವಳಿಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

ಇದಲ್ಲದೆ, ಶಿಕ್ಷಣ ಸಂಸ್ಥೆಗಳು ನಿಗದಿತ ಊಟದ ಸಮಯವನ್ನು ಅನುಸರಿಸಬೇಕು, ಸುರಕ್ಷಿತ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಬೇಕು ಹಾಗೂ ಆರೋಗ್ಯಕರ ಆಹಾರ ಆಯ್ಕೆ ಮತ್ತು ಹೆಚ್ಚಿನ ಕೊಬ್ಬು, ಸಕ್ಕರೆ ಹಾಗೂ ಉಪ್ಪು ಹೊಂದಿರುವ ಆಹಾರ ಸೇವನೆಯ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.

ಸಮೀಕ್ಷೆಯಲ್ಲಿ ಸಂಸ್ಕರಿತ ಕಾರ್ಬೋಹೈಡ್ರೇಟ್ ಹೆಚ್ಚಿರುವುದು ಪತ್ತೆ

ಇತ್ತೀಚೆಗೆ ಇಲಾಖೆ ನಡೆಸಿದ ತಪಾಸಣೆಗಳಲ್ಲಿ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಆಹಾರದಲ್ಲಿ ವೈಟ್ ಬ್ರೆಡ್, ಪಾಸ್ತಾ ಹಾಗೂ ಸಂಸ್ಕರಿತ ತಿಂಡಿಗಳಂತಹ ಸಂಸ್ಕರಿತ ಕಾರ್ಬೋಹೈಡ್ರೇಟ್‌ಗಳು ಅಧಿಕ ಪ್ರಮಾಣದಲ್ಲಿರುವುದು ಕಂಡುಬಂದಿದೆ. ಇಂತಹ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುವುದರಿಂದ, ಅವುಗಳ ಬದಲಿಗೆ ಕಡಿಮೆ ಕೊಬ್ಬಿನ ಪ್ರೊಟೀನ್, ಆರೋಗ್ಯಕರ ಕೊಬ್ಬು ಹಾಗೂ ನಾರಿನಾಂಶ ಹೊಂದಿರುವ ಆಹಾರಗಳನ್ನು ಸಮತೋಲನವಾಗಿ ನೀಡಬೇಕು. ಇದರಿಂದ ದೀರ್ಘಕಾಲ ಶಕ್ತಿ ದೊರೆಯುವುದರ ಜೊತೆಗೆ ಏಕಾಗ್ರತೆ ಮತ್ತು ಮಕ್ಕಳ ಆರೋಗ್ಯಕರ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಲಹಾ ಸೂಚನೆಯ ಪ್ರಕಾರ, ಶಾಲಾ ಊಟದಲ್ಲಿ ಧಾನ್ಯ ಮತ್ತು ಪ್ರೊಟೀನ್ ಗಳ ಸಮತೋಲಿತ ಸಂಯೋಜನೆ, ಸಂಪೂರ್ಣ ಧಾನ್ಯಗಳು, ಬೇಳೆಕಾಳುಗಳು, ಸಿರಿಧಾನ್ಯಗಳು, ಋತುಮಾನಕ್ಕೆ ತಕ್ಕ ತಾಜಾ ಹಣ್ಣುಗಳು, ಹಸಿರು ಸೊಪ್ಪುಗಳು, ಹಾಲು ಹಾಗೂ ಮೊಟ್ಟೆಗಳನ್ನು ಕಡ್ಡಾಯವಾಗಿ ಸೇರಿಸಬೇಕು. ಜೊತೆಗೆ, ಅಗತ್ಯವಿರುವ ಕಡೆಗಳಲ್ಲಿ ಪೌಷ್ಟಿಕಾಂಶಯುಕ್ತ ಗೋಧಿ ಹಿಟ್ಟು, ಅಕ್ಕಿ, ಹಾಲು, ಖಾದ್ಯ ಎಣ್ಣೆ ಮತ್ತು ಡಬಲ್ ಫೋರ್ಟಿಫೈಡ್ ಉಪ್ಪಿನ ಬಳಕೆಯನ್ನೂ ಉತ್ತೇಜಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com