'ಸುಳ್ಳು ಸುದ್ದಿ ಪತ್ರಿಕೋದ್ಯಮವಲ್ಲ', ಹೇಳಿಕೆ ತಿರುಚಿ ಗೊಂದಲ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

"ನನಗೆ ಕೇಳಿದ ಪ್ರಶ್ನೆ, 'ವಿಜಯಪುರ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ನಿಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ನಿಮ್ಮ ಪ್ರತಿಕ್ರಿಯೆ ಏನು?' ಎಂಬುದಾಗಿತ್ತು.
Priyank kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆಗಳ ಕುರಿತು ತಮ್ಮ ಹೇಳಿಕೆಯನ್ನು ತಿರುಚಿ ಸುಳ್ಳು ಮಾಹಿತಿ ಹರಡಿದ ಸುದ್ದಿ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ವಿಜಯಪುರ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ತಮ್ಮ ರಾಜೀನಾಮೆ ಕೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ತಾವು ಉತ್ತರಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

"ನನಗೆ ಕೇಳಿದ ಪ್ರಶ್ನೆ, 'ವಿಜಯಪುರ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ನಿಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ನಿಮ್ಮ ಪ್ರತಿಕ್ರಿಯೆ ಏನು?' ಎಂಬುದಾಗಿತ್ತು.

ಅದಕ್ಕೆ ನಾನು, 'ನನ್ನ ರಾಜೀನಾಮೆ ಕೇಳಿ ಬಿಜೆಪಿ 25 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರೆ, ನಾನು ರಾಜೀನಾಮೆ ಬಗ್ಗೆ ಯೋಚಿಸುತ್ತೇನೆ' ಎಂದು ಹೇಳಿದ್ದೆ. ನನ್ನ ಈ ಹೇಳಿಕೆ ಬಿಜೆಪಿಯ ರಾಜಕೀಯ ನಾಟಕಕ್ಕೆ ಸಂಬಂಧಿಸಿದ್ದೇ ಹೊರತು, ವಿದ್ಯಾರ್ಥಿಗಳಿಗೆ ಸಂಬಂಧಪಟ್ಟದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಳಿಕ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಪಿಎಸ್‌ಐ ನೇಮಕಾತಿ ಹಗರಣ ನಡೆದಿದ್ದು ಬಿಜೆಪಿ ಆಡಳಿತದ ಅವಧಿಯಲ್ಲಿ ವಿಧಾನಸೌಧವನ್ನು "ವ್ಯಾಪಾರ ಸೌಧ"ವನ್ನಾಗಿ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ನಡೆಸುವ ಪ್ರತಿಯೊಂದು ನೇಮಕಾತಿ ಪರೀಕ್ಷೆಯಲ್ಲೂ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡಲು ಬದ್ಧವಾಗಿದೆ ಎಂದು ಹೇಳಿದರು.

Priyank kharge
ಪೊಲೀಸ್ ನೇಮಕಾತಿ ಪರೀಕ್ಷೆ: ಧಾರ್ಮಿಕ ಉಡುಪಿಗೆ ಯಾವುದೇ ನಿರ್ಬಂಧವಿಲ್ಲ; ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಇದೇ ವೇಳೆ ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ ಪ್ರಸಾರ ಮಾಡಿರುವ ಸುದ್ದಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸುವಂತೆ ಗೃಹ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.

"ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವುದು ಮಾತ್ರವಲ್ಲ, ಹಲವು ವರ್ಷಗಳ ಬಳಿಕ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಈ ಸುಳ್ಳು ಮಾಹಿತಿ ಹರಡಲಾಗಿದೆ. ಸುಳ್ಳು ಸುದ್ದಿ ಪತ್ರಿಕೋದ್ಯಮವಲ್ಲ, ಅದು ಜನರನ್ನು ದಾರಿ ತಪ್ಪಿಸುವ ಮತ್ತು ಸಾರ್ವಜನಿಕ ನಂಬಿಕೆಯನ್ನು ಕುಂದಿಸುವ ದುರುದ್ದೇಶದ ತಪ್ಪು ಮಾಹಿತಿ ಎಂದು ಕಿಡಿಕಾರಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, "ದಯವಿಟ್ಟು ಸಂಪೂರ್ಣ ಸಂಭಾಷಣೆಯನ್ನು ಜನರ ಮುಂದೆ ಇಡಿ. ನನ್ನ ಮುಂದೆ ಮೈಕ್ ಹಿಡಿಯುವ ಮೊದಲು ಏನು ಮಾತುಕತೆ ನಡೆಯಿತು? ಯಾವ ವಿದ್ಯಾರ್ಥಿಗಳು ನನ್ನ ರಾಜೀನಾಮೆ ಕೇಳಿದ್ದರು? ರಾಜೀನಾಮೆ ಕೇಳಿದ್ದು ಬಿಜೆಪಿ, ಅದಕ್ಕೆ ನಾನು ಉತ್ತರಿಸಿದ್ದೆ. ಕನ್ನಡ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಸಂಪೂರ್ಣ ಹೇಳಿಕೆಯನ್ನು ದಾಖಲಿಸಿದ್ದರೂ, ಕೆಲವರು ಮಾತ್ರ ಅದನ್ನು ತಿರುಚಿ ಬಿಂಬಿಸಿದ್ದಾರೆ. ಈಗ ತನಿಖೆ ಆರಂಭವಾಗಿರುವುದರಿಂದ ಆಯ್ದ ಭಾಗಗಳನ್ನು ತೋರಿಸುವ ಬದಲು ಸಂಪೂರ್ಣ ವಾಸ್ತವಾಂಶವನ್ನು ತನಿಖೆ ಮುಂದೆ ಇಡಿ ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com