

ಬೆಂಗಳೂರು: ಸಿಎಂ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಇದೀಗ ಸ್ಪೀಕರ್ಗೆ ಪತ್ರ ಬರೆದಿದ್ದು ತಮ್ಮ ರಾಜಿನಾಮೆ ಪತ್ರವನ್ನು ಅಂಗೀಕರಿಸದಂತೆ ಮನವಿ ಮಾಡಿದ್ದಾರೆ.
ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನಾನು ರಾಜಿನಾಮೆ ನೀಡಿದ್ದೆ. ಇದು ನಿಷ್ಠಾವಂತರು, ಪ್ರಾಮಾಣಿಕರಿಗೆ ಕಾಲವಲ್ಲ, ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ. ಈ ವ್ಯವಸ್ಥೆಯ ರಾಜಕಾರಣವೇ ಬೇಡ. ಮನಸ್ಸಿಗೆ ಬಹಳ ನೋವಾಗಿದೆ ಎಂದು ನಿನ್ನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸ್ಪೀಕರ್ಗೆ ಪತ್ರ ಬರೆದಿರುವ ಯಶವಂತರಾಯಗೌಡ ಅವರು ನನ್ನ ರಾಜಿನಾಮೆಯನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಇನ್ನು ಯಶವಂತರಾಯಗೌಡ ಪಾಟೀಲ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಸಿಎಂ ಡಿ.ಕೆ.ಶಿವಕುಮಾರ್, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹಲವು ನಾಯಕರು ರಾಜೀನಾಮೆ ಹಿಂಪಡೆಯುವಂತೆ ಯಶವಂತರಾಯಗೌಡಗೆ ಒತ್ತಾಯಿಸಿದ್ದರು. ಅಲ್ಲದೆ ರಾಜಿನಾಮೆ ವಾಪಸ್ ಪಡೆಯುವಂತೆ ಕಾಂಗ್ರೆಸ್ ಹೈಕಮಾಂಡ್ ಸಹ ಒತ್ತಾಯಿಸಿತ್ತು.