

ತುಮಕೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು, ಸಮಯಪ್ರಜ್ಞೆ ಮೆರೆದ ಚಾಲಕ ಹಾಗೂ ಸಿಬ್ಬಂದಿ ಬಸ್‌ನ್ನು ಸಮೀಪದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಿರುಗಿಸಿ ಪ್ರಯಾಣಿಕನ ಜೀವ ಉಳಿಸಲು ಪ್ರಯತ್ನಿಸಿದ್ದಾರೆ.
ತುಮಕೂರಿನಿಂದ ಮಧುಗಿರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಮಾರ್ಗ ಮಧ್ಯೆ ಏಕಾಏಕಿ ಹೃದಯಾಘಾತ (Heart Attack) ಸಂಭವಿಸಿದೆ.
ಈ ವೇಳೆ ಮಹಿಳೆಯ ಆರೋಗ್ಯ ಗಂಭೀರವಾಗಿರುವುದನ್ನು ತಿಳಿದ ಬಸ್ ಚಾಲಕ ಸಮಯಪ್ರಜ್ಞೆ ಮೆರೆದು, ನಿಗದಿತ ಮಾರ್ಗವನ್ನು ಮುಂದುವರಿಸದೆ ತಕ್ಷಣವೇ ತುಮಕೂರು–ಮಧುಗಿರಿ ರಸ್ತೆಯಲ್ಲಿರುವ ಆಸ್ಪತ್ರೆಗೆ ಬಸ್ ಅನ್ನು ತಿರುಗಿಸಿದ್ದಾರೆ.
ಸಮೀಪದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ದ್ವಾರದವರೆಗೂ ಬಸ್ ಅನ್ನು ಕೊಂಡೊಯ್ದ ಚಾಲಕ, ಯಾವುದೇ ವಿಳಂಬವಾಗದಂತೆ ಮಹಿಳೆಯನ್ನು ಇತರ ಪ್ರಯಾಣಿಕರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.
ತುರ್ತು ಚಿಕಿತ್ಸೆಗೆ ಒಳಪಡಿಸಿದ ಪರಿಣಾಮ ಮಹಿಳೆಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ದೊರೆಯಿತು. ಆಸ್ಪತ್ರೆಗೆ ತಲುಪಿದ ಬಳಿಕ ವೈದ್ಯಕೀಯ ಸಿಬ್ಬಂದಿ ತಕ್ಷಣ ಪ್ರಯಾಣಿಕನಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ವ್ಯಾಪಕ ಮೆಚ್ಚುಗೆ
ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಮಾನವೀಯ ನಡೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಚಾಲಕ ಬಸ್‌ನ ಮಾರ್ಗ ಬದಲಿಸಿ ಆಸ್ಪತ್ರೆಗೆ ಕರೆದೊಯ್ದಿರುವುದು ಪ್ರಯಾಣಿಕರ ಸುರಕ್ಷತೆಗೆ ನೀಡಿದ ಆದ್ಯತೆಯನ್ನು ತೋರಿಸಿದೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.