

ಮಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಮೋಸ್ಟ್ ವಾಂಟೆಡ್ ಆರೋಪಿ ಉಮರ್ ಫಾರೂಕ್ ಎಂ.ಆರ್. ಅವರನ್ನು ಎನ್‌ಐಎ ಅಧಿಕಾರಿಗಳು ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಎನ್‌ಐಎ ಬಂಧಿಸಿರುವ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಉಮ್ಮರ್ ಫಾರೂಕ್ ವಿರುದ್ಧ ಈ ಹಿಂದೆ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಯಾಗಿತ್ತು. ಅಲ್ಲದೆ, ಆತನ ಬಂಧನಕ್ಕೆ ರೂ.4 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು.
ಎನ್‌ಐಎ ತನಿಖೆಯ ಪ್ರಕಾರ, ಉಮರ್ ಫಾರೂಕ್ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಕಚೇರಿಯಲ್ಲಿ ನಡೆದಿದ್ದ ಎನ್ನಲಾದ ಸಂಚು ಸಭೆಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾನೆ.
ಪ್ರವೀಣ್ ನೆಟ್ಟಾರು ಹತ್ಯೆಗೆ ಮುನ್ನ ಪ್ರಮುಖ ಆರೋಪಿಗಳಿಗೆ ಬೈಕ್ ಒದಗಿಸಿದ್ದ ಹಾಗೂ ಬಳಿಕ ಸಾಕ್ಷ್ಯ ನಾಶಕ್ಕೆ ಯತ್ನಿಸಿ, ಆರೋಪಿಗಳಿಗೆ ನೆರವು ನೀಡಿದ್ದಾನೆ ಎಂಬ ಆರೋಪವೂ ಆತನ ವಿರುದ್ಧ ದಾಖಲಾಗಿದೆ. ಹತ್ಯೆ ನಡೆದ ಬಳಿಕ ಉಮ್ಮರ್ ಫಾರೂಕ್ ಕೇರಳದ ಕೊಚ್ಚಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
ತನಿಖೆಯ ಪ್ರಕಾರ, ಪಿಎಫ್‌ಐ ಸಂಘಟನೆಯ ಕೆಲವು ಸದಸ್ಯರು ಆತನಿಗೆ ಆಶ್ರಯ ಕಲ್ಪಿಸಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ರಹಸ್ಯ ಸ್ಥಳದಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ.
ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಎನ್‌ಐಎ ಶೋಧ ಕಾರ್ಯ ಮುಂದುವರಿಸಿದೆ.
2022ರ ಜುಲೈ 26ರಂದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು (32) ಅವರು ತಮ್ಮ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.
ಈ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ 2022ರ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಿತ್ತು.
ಎನ್‌ಐಎ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯ ಪ್ರಕಾರ, ನಿಷೇಧಿತ ಪಿಎಫ್‌ಐ ಸಂಘಟನೆಯ ನಾಯಕರು ಹಾಗೂ ಅದರ 'ಸರ್ವಿಸ್ ಟೀಮ್' ಸದಸ್ಯರು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣದಲ್ಲಿ ವಿವಿಧ ಹಂತಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದವರು ಹಾಗೂ ಆರೋಪಿಗಳಿಗೆ ನೆರವು ನೀಡಿದ್ದವರು ಸೇರಿ ಹಲವು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.