

ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ನವಿಲು ಮತ್ತು ಚಿರತೆ ಎರಡೂ ಸಾವನ್ನಪ್ಪಿರುವ ದುರಂತ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಕುಡಿಯುವ ನೀರಿನ ಪಂಪ್‌ಸೆಟ್‌ಗೆ ಸಂಬಂಧಿಸಿದ ವಿದ್ಯುತ್ ಪರಿವರ್ತಕದ (ಟ್ರಾನ್ಸ್‌ಫಾರ್ಮರ್) ಮೇಲೇರಿದ್ದ ನವಿಲೊಂದು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿತ್ತು.
ಈ ವೇಳೆ ಮೃತ ನವಿಲನ್ನು ಬೇಟೆಯಾಡಿ ತಿನ್ನುವ ಉದ್ದೇಶದಿಂದ ಟ್ರಾನ್ಸ್‌ಫಾರ್ಮರ್ ಮೇಲೇರಿದ ಚಿರತೆಗೂ ವಿದ್ಯುತ್ ಹರಿದು, ಅದು ಸಹ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತಪಟ್ಟ ನವಿಲು ಹಾಗೂ ಚಿರತೆಯ ಶವಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಂಡಿದ್ದಾರೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.