

ಬೆಂಗಳೂರು: ಬೆಂಗಳೂರು ಭಾರತದಲ್ಲೇ ಅತಿ ಹೆಚ್ಚು ಟ್ರಾಫಿಕ್ ಜಾಮ್ ಎದುರಿಸುತ್ತಿರುವ ನಗರ ಹಾಗೂ ಜಾಗತಿಕ ಮಟ್ಟದಲ್ಲಿಯೂ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ, ಇತ್ತೀಚಿನ ವರದಿಗಳ ಪ್ರಕಾರ, ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರು ಕೇವಲ 10 ಕಿಲೋಮೀಟರ್ ದೂರ ಪ್ರಯಾಣಿಸಲು ಸರಾಸರಿ 35 ರಿಂದ 36 ನಿಮಿಷಗಳಿಗಿಂತ ಹೆಚ್ಚು ಕಾಲ ಬೇಕು ಎನ್ನಲಾಗಿದೆ. ಹೀಗೆಯೇ, ನಿನ್ನೆ ಕೂಡ ಬೆಂಗಳೂರಿನ ಹೃದಯಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದ್ರೆ, ಈ ಬಾರಿ ಟ್ರಾಫಿಕ್ ಜಾಮ್ ಗೆ ಕಾರಣವಾಗಿದ್ದು ಯಾವುದೊ ವಾಹನವಲ್ಲ, ಬದಲಾಗಿ ಹಸುಗಳು! ಆಮೇಲೆ ಏನಾಯಿತು ಗೊತ್ತಾ? ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಆಗಸ್ಟ್ 10ರ ಬೆಳಿಗ್ಗೆ ಮಾರತಹಳ್ಳಿ ಮತ್ತು HAL ವಿಮಾನ ನಿಲ್ದಾಣದ ಬಳಿಯ ಕಲಾಮಂದಿರದ ಮುಖ್ಯ ರಸ್ತೆಯಲ್ಲಿ ಮಾಲೀಕರಿಲ್ಲದೆ ಬಿಟ್ಟಿದ್ದ ದನಗಳು ರಸ್ತೆಯ ಮಧ್ಯದಲ್ಲಿ ಬಂದು ನಿಂತಿದ್ದವು. ಇದರಿಂದಾಗಿ ಐಟಿ ಕಾರಿಡಾರ್‌ಗೆ ಸಂಪರ್ಕಿಸುವ ಅತ್ಯಂತ ಬ್ಯುಸಿ ರಸ್ತೆಯಾದ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಅದರಂತೆ, ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳಬೇಕಾಯಿತು.
ಪೊಲೀಸರಿಂದ ಕಠಿಣ ಕಾನೂನು ಕ್ರಮ!
ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ, ಮಾರತ್ತಹಳ್ಳಿಯ ಅಶ್ವಥನಗರ ನಿವಾಸಿಯಾಗಿರುವ, ಹಸುಗಳ ಮಾಲೀಕ 40 ವರ್ಷದ ಸಂತೋಷ್ ಇ. ಎಂಬುವವರ ವಿರುದ್ಧ HAL ಏರ್‌ಪೋರ್ಟ್ ಸಂಚಾರಿ ಪೊಲೀಸರು ಸ್ವಯಂಪ್ರೇರಿತ FIR ದಾಖಲಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಅಡಚಣೆ ಮತ್ತು ಅಪಾಯ ಉಂಟುಮಾಡಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 285 ರ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ.